ಅಕ್ಕಿ ಅಕ್ರಮ ಪ್ರಕರಣ ಸಿಐಡಿಗೆ ಒಪ್ಪಿಸಲು ಆಗ್ರಹ: ಇಂದು ಬಿಜೆಪಿ ಪ್ರತಿಭಟನೆ

| Published : Dec 16 2023, 02:00 AM IST

ಅಕ್ಕಿ ಅಕ್ರಮ ಪ್ರಕರಣ ಸಿಐಡಿಗೆ ಒಪ್ಪಿಸಲು ಆಗ್ರಹ: ಇಂದು ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಡಿತರ ಅಕ್ಕಿಯಲ್ಲಾದ ಹಗರಣವನ್ನು ಸಿಐಡಿಗೆ ಒಪ್ಪಿಸುವಂತೆ ಜಿಲ್ಲಾ ಬಿಜೆಪಿ ಇಂದು ಪ್ರತಿಭಟನೆ ನಡೆಸಲಿದೆ. 6077 ಕ್ವಿಂಟಲ್ ಅಕ್ಕಿ ಪಡಿತರ ನಾಪತ್ತೆಯಾಗೊದ್ದು, ಆರೋಪಿಗಳಿಗೆ ಶಿಕ್ಷೆಗೆ ಆಗ್ರಹಿಸಿದ್ದಾರೆ.

ಶಹಾಪುರ: ಅಕ್ಕಿಯ ಮೂಲ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿರುವುದರಿಂದ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಡಿ.16ರಂದು ಬಿಜೆಪಿ ತಾಲೂಕು ಘಟಕದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

6077 ಕ್ವಿಂಟಲ್ ಅಕ್ಕಿ ಪಡಿತರ ನಾಪತ್ತೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಅಕ್ಕಿ ಕಳ್ಳತನದ ರೂವಾರಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲು ಬಡಪಾಯಿಗಳನ್ನು ಬಲಿಕೊಡಲಾಗುತ್ತಿದೆ. ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕಿದ್ದ ಪೊಲೀಸ್ ಇಲಾಖೆಯ ತನಿಖೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಸಿಬಿ ಕಮಾನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದು ಬಸವೇಶ್ವರ ವೃತ್ತದಲ್ಲಿ ಧರಣಿ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ 5 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ಕೃಷ್ಣಪ್ಪ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಕರವೇ ಆಗ್ರಹ: ಶಹಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ. ಉಗ್ರಾಣದಲ್ಲಿರುವ 6077 ಕ್ವಿಂಟಲ್ ಅನ್ನಭಾಗ್ಯ ಪಡಿತರ ಅಕ್ಕಿ ನಾಪತ್ತೆಯಾಗಿದ್ದು, ಈ ಕುರಿತಾಗಿ ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಭೀಮರಾಯ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ನೀಡಿದ ದೂರಿನನ್ವಯ ಪೊಲೀಸ್ ತನಿಖೆ ವೇಳೆ ಈ ವಿಚಾರಣೆ ಮೇರೆಗೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬಂಧಿತ ಆರೋಪಿ ಶಿವಯ್ಯ ಹೇಳಿಕೆಯಂತೆ, ಉಪ-ನಿದೇರ್ಶಕರಾದ ಭೀಮರಾಯ ಹಾಗೂ ಹಿಂದೆ ಕಾರ್ಯನಿರ್ವಹಿಸಿದ್ದ ಅಧಿಕಾರಿ ಪ್ರಭು ದೊರೆಯನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಇರುವ ಆರೋಪಿಗಳು ಪರಾರಿಯಾಗಿದ್ದು, ಸದರಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳನ್ನು ಅಮಾನತುಗೊಳಸಲಾಗಿದ್ದು, ಆದರೆ ಇನ್ನು ಕೆಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಅಮಾನತುಗೊಳಿಸಿ ಬಂಧಿಸಬೇಕು. ಇಂತಹ ಪ್ರಕರಣಗಳು ಜಿಲ್ಲೆಯ ಯಾವುದೇ ಇಲಾಖೆಯಲ್ಲಿ ಮರುಕಳಿಸದಂತೆ, ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗುತ್ತದೆ ಎಂದರು.

ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳಿಂದ ಹಾಗೂ ಟಿಎಪಿಸಿಎಂಎಸ್ ಶಹಾಪುರ ಸರ್ಕಾರಕ್ಕೆ ಇವರೆಲ್ಲರ ಕಡೆಯಿಂದ ಸದರಿ ಅವರ ಆಸ್ತಿಯನ್ನು ಮಟ್ಟುಗೊಲು ಹಾಕಿಕೊಂಡು ಸರಕಾರಕ್ಕೆ ನಷ್ಟ ಭರಿಸಬೇಕೆಂದು ಒತ್ತಾಯಿಸಿದರು.

ಕರವೇ ಮುಂಖಡರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬರೇಶ ಹತ್ತಿಮನಿ, ವಿಶ್ವರಾಧ್ಯ ದಿಮ್ಮೆ, ಸಾಹೇಬಗೌಡನಾಯಕ, ಸಂತೋಷ ನಿರ್ಮಲಕರ್, ಅರ್ಜುನ ಪವಾರ್, ವಿಶ್ವರಾಧ್ಯ ಹೊನಗೇರಾ, ಅಬ್ದುಲ್ ಚಿಗಾನೂರ, ರಮೇಶ.ಡಿ.ನಾಯಕ ಇತರರಿದ್ದರು.