ಮಹಿಳಾ ಸೇವಾ ಸಮಾಜದ ಸದಸ್ಯೆ ರೂಪ ಜನಾರ್ಧನ ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಹಿಳಾ ಸೇವಾ ಸಮಾಜದ ಅವ್ಯವಹಾರಗಳ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸುಮಾರು 97 ವರ್ಷ ಇತಿಹಾಸವಿರುವ ರಾಜ್ಯದ ಅತೀ ಹಳೆಯ ಚಿತ್ರದುರ್ಗದ ಮಹಿಳಾ ಸೇವಾ ಸಮಾಜದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದಿರುವ ಕಾರಣದಿಂದಾಗಿ ಗೊಂದಲ, ಅವ್ಯವಹಾರ, ಅಧಿಕಾರ ದುರುಪಯೋಗ ಉಂಟಾಗಿದೆ ಎಂದು ಮಹಿಳಾ ಸೇವಾ ಸಮಾಜದ ಸದಸ್ಯೆ ರೂಪ ಜನಾರ್ಧನ ಆರೋಪಿಸಿದ್ದಾರೆ.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಸೇವಾ ಸಮಾಜವು ರಾಜ್ಯದಲ್ಲೇ ಅಪರೂಪದ ಮಹಿಳಾ ಸಂಘಟನೆಯಾಗಿದ್ದು ಕಳೆದ 97 ವರ್ಷಗಳಿಂದಲೂ ಅಸ್ಥಿತ್ವದಲ್ಲಿದೆ. ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದ್ದ ಸಂಘಟನೆ ಈಗ ಗೊಂದಲದ ಗೂಡಾಗಿದೆ. ಸಂಘದ ಆಡಳಿತ ಮಂಡಳಿಗೆ ಕಳೆದ 7 ವರ್ಷಗಳಿಂದ ಚುನಾವಣೆ ನಡೆಸದ ಕಾರಣ ಭಾರಿ ಮೊತ್ತದ ಅವ್ಯವಹಾರ ನಡೆದಿದೆ. ಆಡಳಿತ ಮಂಡಳಿ ಕೊನೆಗೊಂಡಿದ್ದರೂ ಹಳೇ ಸಮಿತಿಯ ಉಪಾಧ್ಯಕ್ಷ ಮೋಕ್ಷಾ ರುದ್ರಸ್ವಾಮಿ ಹಾಗೂ ಅವರ ಪರ ಇರುವ ಕೆಲ ಕಮಿಟಿ ಸದಸ್ಯರು ತೆರೆಮರೆಯಲ್ಲಿ ಆಡಳಿತ ಮುಂದುವರಿಸುತ್ತಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದು ಸಮಾಜದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು. ಮೈಸೂರು ಅರಸರು ದೂರದೃಷ್ಟಿಯಿಂದ ಮಹಿಳೆಯರ ಪ್ರಗತಿಗಾಗಿ ಭೂಮಿಕೊಟ್ಟಿದ್ದರು. ಒಟ್ಟಾರೆ ಆಸ್ತಿಯ ಮೌಲ್ಯ ಅಂದಾಜು 150 ಕೋಟಿ ರು. ಇದೆ. 10 ವರ್ಷಗಳ ಹಿಂದೆ ಮಳಿಗೆ ನಿರ್ಮಾಣ ಮಾಡಲಾಗಿದ್ದು ತಿಂಗಳಿಗೆ ಸುಮಾರು 1.5 ಲಕ್ಷ ರು. ಬಾಡಿಗೆ ಬರುತ್ತದೆ. ಇದನ್ನು ಮಹಿಳೆಯರ ವಿವಿಧ ಚಟುವಟಿಕೆ, ತರಬೇತಿಗಳಿಗೆ ವಿನಿಯೋಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ಇಲ್ಲಿಯವರೆಗೆ ಈ ಹಣವನ್ನು ಮಹಿಳೆಯರ ಪ್ರಗತಿಗೆ ವಿನಿಯೋಗಿಸದೇ ದುರುಪಯೋಗ ಮಾಡಲಾಗಿದೆ. ಲಕ್ಷಾಂತರ ರು. ಬಾಡಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಹಿಂದಿನ ಆಡಳಿತ ಮಂಡಳಿ ಉಪಾಧ್ಯಕ್ಷೆಯಾಗಿರುವ ಮೋಕ್ಷಾ ರುದ್ರಸ್ವಾಮಿ ಅವರ ಅಧಿಕಾರಾವಧಿ ಮುಗಿದಿದ್ದರೂ ಈಗಲೂ ಮಹಿಳಾ ಸಮಾಜದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು ತೆರೆಮರೆಯಲ್ಲಿ ತಮ್ಮ ಆಡಳಿತ ನಡೆಸುತ್ತಿದ್ದಾರೆ ಎಂದರು.
ಮಹಿಳಾ ಸಮಾಜದ ವತಿಯಿಂದ ನಡೆಯುತ್ತಿದ್ದ ಅಬಲಾಶ್ರಮ, ಶಿಶುವಿಹಾರ ಕೂಡ ಸ್ಥಗಿತಗೊಂಡಿವೆ. ಸಮಾಜ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಕೆಲವು ಸದಸ್ಯರು ಕಳೆದ 1 ವರ್ಷದಿಂದ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದೇವೆ. ಜಿಲ್ಲಾಧಿಕಾರಿ ಕಚೇರಿ, ಸಹಕಾರ ಇಲಾಖೆಯ ಕಚೇರಿ ಸುತ್ತಿದ್ದೇವೆ. ಆದರೂ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ನಮ್ಮ ಪ್ರತಿ ಪ್ರಯತ್ನವನ್ನೂ ಮೋಕ್ಷಾ ರುದ್ರಸ್ವಾಮಿ ಅವರು ತಡೆಯುತ್ತಾ ಬಂದಿದ್ದಾರೆ. ಮಹಿಳಾ ಸಮಾಜದ ಆಡಳಿತ ಮಂಡಳಿಗೆ ಚುನಾವಣೆ ನಡೆಸಬೇಕು ಎಂದು ಸಹಕಾರ ಇಲಾಖೆ ಸಚಿವಾಲಯದಿಂದ ಜಿಲ್ಲಾಧಿಕಾರಿ ಹಾಗೂ ಡಿಆರ್ ಅವರಿಗೆ ಪತ್ರ ಬಂದಿದೆ.90 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಇಲಾಖೆ ಸೂಚನೆ ನೀಡಿದೆ. ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಚುನಾವಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇಷ್ಟಾದರೂ ಎಲ್ಲಾ ಆದೇಶ, ಸೂಚನೆಗಳನ್ನು ಸ್ಥಗಿತಗೊಳಿಸಿ ಚುನಾವಣೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಸಮಾಜಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದರು.
ಈ ಕುರಿತು ಜ.21ರಂದು ಲೋಕಾಯುಕ್ತಕ್ಕೂ ಸಹ ದೂರು ನೀಡಲಾಗಿದೆ. ಚುನಾವಣೆ ನಡೆಸಲು ಎಲ್ಲಾ ಅವಕಾಶಗಳಿದ್ದರೂ ಅಧಿಕಾರಿಗಳು ಚುನಾವಣೆ ನಡೆಸದೇ ಆಡಳಿತಾಧಿಕಾರಿ ನೇಮಕ ಮಾಡುವ ಹುನ್ನಾರ ನಡೆಯುತ್ತಿದೆ. ಈ ಹಿಂದೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಚುನಾವಣೆ ನಡೆಸುವ ಅಧಿಕಾರ ನೀಡಿದ್ದರೂ ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾಧಿಕಾರಿ ಹಾಗೂ ಡಿಆರ್ ಮೇಲೆ ಒತ್ತಡ ತಂದು ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ಸರ್ಕಾರಕ್ಕೆ ಮತ್ತೆ ಮನವಿ ಕಳುಹಿಸುವಂತೆ ನೋಡಿಕೊಂಡಿದ್ದಾರೆ. ಆ ಮೂಲಕ ಹಿಂದಿನ ಬಾಗಿಲ ಮೂಲಕ ಮಹಿಳಾ ಸಮಾಜದ ಆಸ್ತಿ, ಹಣವನ್ನು ದುರುಪಯೋಗ ಮಾಡಿಕೊಳ್ಳಲು ಹುನ್ನಾರ ನಡೆಸಲಾಗಿದೆ ಎಂದು ದೂರಿದರು.ಕಳೆದೊಂದು ವರ್ಷದಿಂದ ಬ್ಯಾಂಕ್ ಅಕೌಂಟ್ ಅನ್ನೂ ಹೋಲ್ಡ್ ಮಾಡಿಸಿರುವ ಕಾರಣ ಸುಮಾರು 25 ಲಕ್ಷ ರು. ಹಣ ಸಂಗ್ರಹವಾಗಿದೆ. ಮೋಕ್ಷಾ ರುದ್ರಸ್ವಾಮಿ ಅಧಿಕಾರದ ಅವಧಿಯ 7 ವರ್ಷದಲ್ಲಿ ಸಂಗ್ರಹವಾದ ಹಣ ಏನಾಯಿತು ಎಂಬುದು ತಿಳಿಯಬೇಕಾಗಿದೆ. 7 ವರ್ಷಗಳಿಂದ ಕೇವಲ ಕಟ್ಟಡಗಳಿಗೆ ಬಣ್ಣ ಬಳಿಸುತ್ತಾ ಲಕ್ಷಾಂತರ ರು. ಹಣ ಲಪಟಾಯಿಸುತ್ತಿದ್ದಾರೆ.
ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಇರುವ ಮಹಿಳಾ ಸಮಾಜದ ಅವ್ಯವಹಾರನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಕಮಿಟಿಯಲ್ಲಿದ್ದ ಸದಸ್ಯರು ಮೋಕ್ಷಾ ರುದ್ರಸ್ವಾಮಿರವರ ಅವ್ಯವಹಾರಗಳನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ಆದರೆ ಮೋಕ್ಷಾ ಹಾಗೂ ಅವರ ಪರ ಇರುವ ಸದಸ್ಯರು ಪ್ರಶ್ನೆ ಮಾಡುವ ಸದಸ್ಯರ ವಿರುದ್ಧ ಮಹಿಳಾ ಸಮಾಜದ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಸಮಾಜದಿಂದ ಉಚ್ಚಾಟನೆ ಮಾಡುವ ಅಸ್ತ್ರ ಬಳಕೆ ಮಾಡಿದ್ದಾರೆ. ಅವರ ಪರ ಇರುವ ಸದಸ್ಯರನ್ನು ಮಾತ್ರ ಕಮಿಟಿಗೆ ತೆಗೆದುಕೊಂಡು ಅವ್ಯವಹಾರ ಮುಂದುವರಿಸಿದ್ದಾರೆ ಎಂದರು.