ರಸಗೊಬ್ಬರ ವಿತರಣೆಗೆ ಜಾರಿಗೆ ತಂದಿರುವ ಎಫ್‌ಐಡಿ ಕಡ್ಡಾಯ ನಿಯಮವನ್ನು ತಕ್ಷಣವೇ ಕೈಬಿಡಬೇಕು ಹಾಗೂ ಪ್ರಕೃತಿ ವಿಕೋಪದಿಂದ ಕಂಗಾಲಾಗಿರುವ ಜಿಲ್ಲೆಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯಿಂದ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ರಸಗೊಬ್ಬರ ವಿತರಣೆಗೆ ಜಾರಿಗೆ ತಂದಿರುವ ಎಫ್‌ಐಡಿ ಕಡ್ಡಾಯ ನಿಯಮವನ್ನು ತಕ್ಷಣವೇ ಕೈಬಿಡಬೇಕು ಹಾಗೂ ಪ್ರಕೃತಿ ವಿಕೋಪದಿಂದ ಕಂಗಾಲಾಗಿರುವ ಜಿಲ್ಲೆಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸದ್ಯ ಜಾರಿಯಲ್ಲಿರುವ ಎಫ್‌ಐಡಿ ನಿಯಮಗಳ ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಭಾಗದ ಸಾಮಾನ್ಯ ರೈತರು ಸಕಾಲದಲ್ಲಿ ರಸಗೊಬ್ಬರ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಲ್ಲಿ ಈ ನಿಯಮವನ್ನು ತಕ್ಷಣವೇ ಕೈಬಿಡಬೇಕು. ಮಾರುಕಟ್ಟೆಯಲ್ಲಿ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ಜತೆಗೆ ಖಾಸಗಿ ಕಂಪನಿಗಳು ಅನಗತ್ಯವಾಗಿ ಲಿಂಕ್ ಆಧಾರಿತ ಕೀಟನಾಶಕ, ಔಷಧಿಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ರೈತರನ್ನು ಒತ್ತಾಯಿಸುತ್ತಿವೆ. ಇದೊಂದು ದಂಧೆಯಾಗಿ ಪರಿವರ್ತನೆಯಾಗಿದ್ದು, ತಕ್ಷಣವೇ ನಿಲ್ಲಿಸಬೇಕು ಮತ್ತು ರಸಗೊಬ್ಬರಗಳ ಬೆಲೆ ಇಳಿಸಬೇಕು ಎಂದು ರೈತರು ಆಗ್ರಹಿಸಿದರು.ಕಳೆದ ಬಾರಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿಲ್ಲ. ಇದರ ಬೆನ್ನಲ್ಲೇ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಮುರಿದು ಹೋದ ದಿನದಿಂದ ಸಮರ್ಪಕವಾಗಿ ನೀರು ಸಿಗದೆ ರೈತರು ಯಾವುದೇ ಬೆಳೆ ಬೆಳೆಯಲಾಗದೆ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಪ್ರಕೃತಿ ವಿಕೋಪ ಹಾಗೂ ಮಾರುಕಟ್ಟೆ ಏರುಪೇರಿನಿಂದ ಕಂಗಾಲಾಗಿರುವ ಅನ್ನದಾತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತ ಸಂಘದ ಪ್ರಮುಖರಾದ ಜೆ. ಉಮಾದೇವಿ, ಎಚ್‌.ಜಿ. ಮಲ್ಲಿಕಾರ್ಜುನ, ಹೇಮರೆಡ್ಡಿ, ಎಲ್.ಎಸ್. ರುದ್ರಪ್ಪ, ಜಗನ್‌ರಾಜ, ನಾಗರಾಜ, ನಲ್ಲಪ್ಪ, ಹನುಮಂತಪ್ಪ ಭಾಗವಹಿಸಿದ್ದರು. ನಗರದ ಶ್ರೀಸಾಯಿ‌ ಬಾಬಾ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.