ಸಾರಾಂಶ
ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಅನೇಕ ಐತಿಹಾಸಿಕ ಮಠ. ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಸೇರಿಸಿದ್ದು ಸ್ವಾಗತಾರ್ಹವಾಗಿದ್ದು, ಇವುಗಳ ಜತೆಗೆ ಮುಂಡರಗಿ ತಾಲೂಕಿನ ಬಿದರಳ್ಳೆಮ್ಮ, ಗೋಣಿಬಸವೇಶ್ವರ, ರಸಲಿಂಗು ದೇವಸ್ಥಾನ, ಮುಂಡರಗಿ ತೋಂಟದಾರ್ಯ ಮಠವನ್ನು ಸಹ ಒಳಪಡಿಸಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಒತ್ತಾಯಿಸಿದ್ದಾರೆ.
ಮುಂಡರಗಿ:ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಜಿಲ್ಲೆಯ ಅನೇಕ ಐತಿಹಾಸಿಕ ಮಠ. ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಸೇರಿಸಿದ್ದು ಸ್ವಾಗತಾರ್ಹವಾಗಿದ್ದು, ಇವುಗಳ ಜತೆಗೆ ಮುಂಡರಗಿ ತಾಲೂಕಿನ ಬಿದರಳ್ಳೆಮ್ಮ, ಗೋಣಿಬಸವೇಶ್ವರ, ರಸಲಿಂಗು ದೇವಸ್ಥಾನ, ಮುಂಡರಗಿ ತೋಂಟದಾರ್ಯ ಮಠವನ್ನು ಸಹ ಒಳಪಡಿಸಬೇಕೆಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಒತ್ತಾಯಿಸಿದ್ದಾರೆ.
ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿದರಹಳ್ಳಿ ರೇಣುಕಾಂಬಾ ದೇವಸ್ಥಾನಕ್ಕೆ ನಾಡಿನ ವಿವಿಧೆಡೆಗಳಲ್ಲಿ ಭಕ್ತರಿದ್ದಾರೆ. ಇದೊಂದು 15-16ನೇ ಶತಮಾನದ ವಿಶಿಷ್ಟ ವಾಸ್ತುಶಿಲ್ಪದ ಜತೆಗೆ ಪುಷ್ಕರಣಿ ಹೊಂದಿರುವ ಐತಿಹಾಸಿಕ ಗೋಣಿಬಸವೇಶ್ವರ ದೇವಸ್ಥಾನ, ದಿನಕ್ಕೊಂದು ಬಣ್ಣವಾಗುವ ವಿಠಲಾಪೂರದ ಅಪರೂಪದ ರಸಲಿಂಗು ದೇವಸ್ಥಾನವನ್ನು ಪ್ರವಾಸೋದ್ಯಮ ಇಲಾಖೆಗೆ ಒಳಪಡಿಸಿ ಅಭಿವೃದ್ಧಿಗೊಳಿಸುವುದರ ಜತೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಡೆಯಾಗುತ್ತಿರುವ ಗೋಣಿಬಸವೇಶ್ವರ ದೇವಸ್ಥಾನವನ್ನು ಕೂಡಲ ಸಂಗಮದ ಮಾದರಿಯಲ್ಲಿ ಸಂರಕ್ಷಣೆ ಮಾಡಬೇಕು ಎಂದರು. ಮುಂಡರಗಿ ಪಟ್ಟಣದ ಹಳೆಮಠವೆಂದೇ ಖ್ಯಾತವಾಗಿರುವ ತೋಂಟದಾರ್ಯ ಮಠ, ಗುಡ್ಡದಮೇಲಿರುವ ಲಕ್ಷ್ಮಿ ಕನಕ ನರಸಿಂಹ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಅಲ್ಲಿನ ಕೋಟೆಯನ್ನು ಅಭಿವೃದ್ಧಿಪಡಿ ಸಬೇಕು. ಬರದೂರಿನ ಅಹೋಬಲ ನರಸಿಂಹ ದೇವಾಲಯ, ಜಂತ್ಲಿಶಿರೂರ ಶ್ರೀ ಕೃಷ್ಣ ದೇವಾಲಯ, ಮೇವುಂಡಿ ದಿಡೀಗೇಶ್ವರ ದೇವಾಲಯ, ಡಂಬಳದ ಐತಿಹಾಸಿಕ ಜಪದಬಾವಿ ಸೇರಿದಂತೆ ತಾಲೂಕಿನಲ್ಲಿರುವ ಅನೇಕ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳನ್ನು ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಇಲಾಖೆಗೆ ಸೇರಿಸಿ ಅವುಗಳನ್ನು ಜಿಲ್ಲೆಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಅಭಿವೃದ್ಧಿಪಡಿಸಬೇಕೆಂದು ಗೌಡರ್ ಒತ್ತಾಯಿಸಿದ್ದಾರೆ.