ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅಡುಗೆ ಎಣ್ಣೆ ಮತ್ತು ಬೇಳೆಯನ್ನು ಸರ್ಕಾರ ೩ ತಿಂಗಳಿಂದ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡಿದ ಪ್ರಕರಣ ವಿಧಾನ ಪರಿಷತ್‌ನಲ್ಲಿ ನಡೆದಿದೆ.ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಮಾಡಿದ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಅವರು, ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಅಡುಗೆ ಮಾಡಲು ಸರ್ಕಾರ ಎಣ್ಣೆ ಮತ್ತು ಬೇಳೆಕಾಳು ಮುಂಗಡವಾಗಿ ನೀಡುತ್ತಿಲ್ಲ, ೨- ೩ ತಿಂಗಳಿಗೊಮ್ಮೆ ಎಣ್ಣೆ ಕೊಡುತ್ತಾರೆ. ಡಿಸೆಂಬರ್ ಮಾಹೆಯಿಂದ ಈವರೆಗೆ ಎಣ್ಣೆ ಕೊಟ್ಟಿಲ್ಲ, ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ನೀಡುತ್ತಿರುವ ಮೊಟ್ಟೆ ಖರೀದಿಗೆ ಸರ್ಕಾರ ನಿಗದಿಪಡಿಸಿರುವ ಹಣವನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿದರು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವಾದ ಮೊಟ್ಟೆಯನ್ನು ವಾರದಲ್ಲಿ ೬ ದಿನ ವಿತರಿಸುವ ಯೋಜನೆಗೆ ಒಂದು ಮೊಟ್ಟೆಗೆ ೫ ರು.ಯನ್ನು ಸರ್ಕಾರ ನೀಡುತ್ತಿದೆ. ಮೊಟ್ಟೆಗೆ ಕೊಡುತ್ತಿರುವ ಹಣವು ಸಾಕಾಗುತ್ತಿಲ್ಲ. ಹೆಚ್ಚು ಮಾಡಬೇಕಾಗಿದೆ. ಅಡುಗೆ ಮಾಡುವ ಬಿಸಿಯೂಟದ ಸಿಬ್ಬಂದಿಗೆ ವೇತನ ಹೆಚ್ಚಿಸಬೇಕು, ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇತನವೂ ಸಿಗುತ್ತಿಲ್ಲ, ಹಾಗಾಗಿ ಸರ್ಕಾರವು ಬಿಸಿಯೂಟದ ಸಿಬ್ಬಂದಿಗೆ ವೇತನ ಹೆಚ್ಚಿಸಬೇಕು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಬಿಸಿಯೂಟ ಯೋಜನೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರಿಸಿ, ಕೇಂದ್ರ ಸರ್ಕಾರದ ನಿಯಮದಂತೆ ಬಿಸಿಯೂಟದ ಸಿಬ್ಬಂದಿಗೆ ವೇತನ ಪಾವತಿಸುತ್ತಿದೆ, ಕೇಂದ್ರ ಸರ್ಕಾರವು ವೇತನ ಹೆಚ್ಚಳ ಮಾಡಿದರೆ ನಾವು ಸಹ ಹೆಚ್ಚಿಸಲು ಸಾಧ್ಯ, ಅಡುಗೆ ಸಿಬ್ಬಂದಿಗೆ ಮೊನ್ನೆ ಮಂಡನೆಯಾದ ಬಜೆಟ್‌ನಲ್ಲಿ ೧ ಸಾವಿರ ರು. ವೇತನ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರವೇ ಹೆಚ್ಚು ವೇತನ ನೀಡುತ್ತಿದೆ ಎಂದು ವಿವರಿಸಿದರು.ಮೊಟ್ಟೆಗೆ ಹಣ ಹೆಚ್ಚಾಗಿ ಕೊಡುವ ಬಗ್ಗೆ ಅರ್ಥಿಕ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ, ೪.೫೦ ರು. ಗಳಿಗೆ ಮೊಟ್ಟೆ ಸಿಗುವ ಉದಾಹರಣೆ ಇದೆ. ನ್ಯಾಷನಲ್ ಮಾರ್ಕೆಟ್‌ನಲ್ಲಿ ಮೊಟ್ಟೆಯೊಂದಕ್ಕೆ ಬೆಲೆ ೪,೭೦ ರು. ಇದೆ. ಆದರೂ ಮೊಟ್ಟೆ ಹಣ ಹೆಚ್ಚು ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು.
ಅಡುಗೆ ಎಣ್ಣೆ ಮತ್ತು ಬೇಳೆ ಸರಬರಾಜು ತಡ ಆಗಿದ್ದರೆ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.