ಸಾರಾಂಶ
ಚಿಕ್ಕಮಗಳೂರು, ಶ್ರೀ ಗುರು ದತ್ತಾತ್ರೇಯ ಪೀಠದ ಗರ್ಭಗುಡಿಯ ದ್ವಾರದಲ್ಲಿ ಬರೆದಿರುವ ಉರ್ದು ಫಲಕ ತೆರವುಗೊಳಿಸಿ, ಕನ್ನಡದಲ್ಲಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಉರ್ದು ಫಲಕ ತೆರವುಗೊಳಿಸಬೇಕು । ಕರ್ನಾಟಕ ನವ ನಿರ್ಮಾಣ ಸೇನೆ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶ್ರೀ ಗುರು ದತ್ತಾತ್ರೇಯ ಪೀಠದ ಗರ್ಭಗುಡಿಯ ದ್ವಾರದಲ್ಲಿ ಬರೆದಿರುವ ಉರ್ದು ಫಲಕ ತೆರವುಗೊಳಿಸಿ, ಕನ್ನಡದಲ್ಲಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಸೇನೆ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ವಾಣಿಶ್ರೀ ಅವರು, ಗುರು ದತ್ತಾತ್ರೇಯರ ಪುಣ್ಯ ಸ್ಥಳವಾದ ಪೀಠದಲ್ಲಿ ಕನ್ನಡ ಫಲಕ ಅಳವಡಿಸುವ ಬದಲು, ಉರ್ದುವಿನಲ್ಲಿ ಫಲಕ ಅಳವಡಿಸಿರುವುದು ಸರಿಯಲ್ಲ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ಫಲಕಕ್ಕೆ ಮಸಿ ಬಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯಗೊಳಿಸಿ ಆದೇಶಿಸಿದೆ. ಆದರೆ, ದತ್ತಪೀಠದ ದೇವಸ್ಥಾನ ಸರ್ಕಾರವೇ ಅಧೀನದಲ್ಲಿದ್ದರೂ ಉರ್ದುವಿ ನಲ್ಲಿ ಫಲಕ ಹಾಕಿ ಕನ್ನಡಿಗರಿಗೆ ಅವಮಾನಿಸುತ್ತಿದೆ ಎಂದರು.ಶ್ರೀ ಗುರು ದತ್ತಾತ್ರೇಯ ಪೀಠ ಸಮಸ್ತ ಕನ್ನಡಿಗರ ಆಸ್ತಿ. ಪ್ರತಿದಿನ ಸಾವಿರಾರು ಭಕ್ತರು ಕುಟುಂಬ ಸಮೇತ ದರ್ಶನ ಬರುವವರ ಮಾತೃಭಾಷೆ ಕನ್ನಡವೇ ಆಗಿರುತ್ತದೆ ಎಂದ ಅವರು, ರಾಜ್ಯದಲ್ಲಿ ಜನಿಸಿ ಕನ್ನಡ ಬರುವುದಿಲ್ಲ, ನಾವು ಉರ್ದು ವನ್ನು ಪ್ರೀತಿಸುತ್ತೇವೆ ಎನ್ನುವವರನ್ನು ಓಲೈಸಲು ಸರ್ಕಾರ ಮತ್ತು ಜಿಲ್ಲಾಡಳಿತ ನಾಡದ್ರೋಹ ಕೆಲಸಕ್ಕೆ ಕೈ ಜೋಡಿಸುತ್ತಿದೆ ಎಂದರು.ಕನ್ನಡಿಗರ ಶ್ರದ್ಧಾಭಕ್ತಿಯ ಪವಿತ್ರ ಕೇಂದ್ರ ಹಾಗೂ ತಪಸ್ಸುಗೈದ ಚಂದ್ರದ್ರೋಣ ಪರ್ವತ ಸಾಲಿನ ಶ್ರೀ ಗುರು ದತ್ತಾತ್ರೇಯರು ಪುಣ್ಯಸ್ಥಳಕ್ಕೆ ನಾಡಿನ ಭಕ್ತಾಧಿಗಳು, ಪ್ರವಾಸಿಗರಿಗೆ ದ್ವಾರದ ಮೇಲೆ ಬರೆದಿರುವ ಉರ್ದು ಭಾಷೆ ಅರ್ಥವಾಗುತ್ತಿಲ್ಲ. ಹೀಗಾಗಿ ಸಮಸ್ತ ಕನ್ನಡಿಗರಿಗೆ ಅರ್ಥವಾಗುವಂತೆ ಕನ್ನಡದಲ್ಲೇ ಫಲಕ ಹಾಕಬೇಕು ಎಂದು ಆಗ್ರಹಿಸಿದರು.ಅಪ್ಪಟ ಕನ್ನಡಿಗರಿರುವ ನಾಡಿನಲ್ಲಿ ಪ್ರತಿಯೊಂದು ಕಡೆಗಳಲ್ಲೂ ಎಲ್ಲಾ ರೀತಿಯ ಜಾತಿ, ಧರ್ಮವರು ಕನ್ನಡವನ್ನು ಪೂಜಿಸಿ, ಪ್ರೀತಿಸಬೇಕು. ಅದರಂತೆ ದತ್ತಪೀಠದ ಗರ್ಭಗುಡಿ ಬಾಗಿಲಿನ ಮೇಲೆ ಕನ್ನಡವೇ ಸಾರ್ವಭೌಮವಾಗಿ ಮೆರೆಯಬೇಕು. ಧರ್ಮದ ಹೆಸರಿನಲ್ಲಿ ಕನ್ನಡ ಭಾಷೆ ಮೇಲೆ ಸವಾರಿ ಮಾಡಲು ಮುಂದಾದರೆ ಸೇನೆ ಎಂದಿಗೂ ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.ಸೇನೆ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಿಂಗಳೊಳಗಾಗಿ ದತ್ತಪೀಠದ ಬಾಗಿಲಿನ ಉರ್ದು ಫಲಕ ತೆರವುಗೊಳಿಸಿ, ಕನ್ನಡದಲ್ಲಿ ಫಲಕ ಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯಧೋರಣೆ ಅನುಸರಿಸಿದರೆ ಸೇನೆ ಕಾರ್ಯಕರ್ತರು ಫಲಕ ತೆರಳಲು ಮುಂದಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಸೇನೆ ಕಾರ್ಯಕರ್ತರು ಕನ್ನಡ ಫಲಕ ಅಳವಡಿಸುವ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೇನೆ ಕಾರ್ಯದರ್ಶಿ ಚಂದ್ರೇಗೌಡ, ಪದಾಧಿಕಾರಿಗಳಾದ ಚಿದಾನಂದ್, ನಾಗರಾಜ್, ನಂದಿನಿ ಇದ್ದರು. 17 ಕೆಸಿಕೆಎಂ 5ಶ್ರೀ ಗುರು ದತ್ತಾತ್ರೇಯ ಪೀಠದ ಗರ್ಭಗುಡಿ ದ್ವಾರದಲ್ಲಿ ಬರೆದಿರುವ ಉರ್ದು ಫಲಕ ತೆರವುಗೊಳಿಸಿ, ಕನ್ನಡದಲ್ಲಿ ಫಲಕ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಚಿಕ್ಕಮಗಳೂರಿನ ಆಜಾದ್‌ಪಾರ್ಕ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.