ಗಾಣಗಾಪೂರ ಬ್ಯಾರೇಜ್‌ಗೆ ಹೈಡ್ರಾಲಿಕ್ ಗೇಟ್‌ ಅಳವಡಿಸಲು ಆಗ್ರಹ

| Published : Oct 02 2024, 01:03 AM IST

ಗಾಣಗಾಪೂರ ಬ್ಯಾರೇಜ್‌ಗೆ ಹೈಡ್ರಾಲಿಕ್ ಗೇಟ್‌ ಅಳವಡಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರದಲ್ಲಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರೀಜ್ ಕಂ ಬ್ಯಾರೇಜ್‌ ಗೇಟ್‌ಗಳು ಹಾಳಾಗಿ ನೀರು ಪೋಲಾಗುತ್ತಿವೆ

ಚವಡಾಪುರ:

ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರದಲ್ಲಿನ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರೀಜ್ ಕಂ ಬ್ಯಾರೇಜ್‌ ಗೇಟ್‌ಗಳು ಹಾಳಾಗಿ ನೀರು ಪೋಲಾಗುತ್ತಿವೆ. ಹೀಗಾಗಿ ಹೈಡ್ರಾಲಿಕ್ ಗೇಟ್‌ ಅಳವಡಿಸಿ ಎಂದು ಭೀಮಾ ಅಮರ್ಜಾ ನದಿ ರೈತ ಸಂಘದವರು ಅಫಜಲ್ಪುರ ತಾಲೂಕಿನ ಚವಡಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ದೇವಲ ಗಾಣಗಾಪೂರದಲ್ಲಿನ ಭೀಮಾ ಅಮರ್ಜಾ ನದಿ ಸಂಗಮಕ್ಕೆ ಲಕ್ಷಾಂತರ ಭಕ್ತರು ಪುಣ್ಯಸ್ನಾನಕ್ಕಾಗಿ ಬರುತ್ತಾರೆ. ದತ್ತನ ದರ್ಶನಕ್ಕೆ ಬರುವವರು ನದಿ ನೀರನ್ನು ಪುಣ್ಯಜಲವೆಂದು ಭಾವಿಸುತ್ತಾರೆ. ಅಲ್ಲದೆ ದೇವಲ ಗಾಣಗಾಪೂರ ಭಾಗದ ಹತ್ತಾರು ಹಳ್ಳಿಗಳಿಗೆ ನದಿ ನೀರು ಕೃಷಿ, ಕುಡಿಯಲು ವರದಾನವಾಗಿದೆ. ಆದರೆ ಬ್ಯಾರೇಜ್‌ ಗೇಟ್‌ ಹಾಳಾಗಿ ನೀರು ಪೋಲಾಗುತ್ತಿದೆ. ಹೀಗಾಗಿ ಘತ್ತರಗಿ, ಚಿನಮಳ್ಳಿಗಳಲ್ಲಿನ ಬ್ಯಾರೇಜ್‌ಗಳಿಗೆ ಹೈಡ್ರಾಲಿಕ್ ಗೇಟ್ ಅಳವಡಿಸಿದಂತೆ ದೇವಲ ಗಾಣಗಾಪೂರ ಬ್ಯಾರೇಜ್‌ಗೆ ಹೈಡ್ರಾಲಿಕ್ ಗೇಟ್‌ ಅಳವಡಿಸಿ ಮತ್ತು ಇಂಗಳಗಿ ಗಾಣಗಾಪೂರಗಳ ಮಧ್ಯದ ಅಮರ್ಜಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ಯಾರೇಜ್ ಮೇಲ್ದರ್ಜೆಗೇರಿಸಿ ನೀರು ಹಿಡಿದಿಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಬಳಿಕ ಶಾಸಕ ಎಂ.ವೈ ಪಾಟೀಲ್‌ಗೆ ಮನವಿ ಸಲ್ಲಿಸಿದರು. ಮನವಿ ಸ್ವಿಕರಿಸಿ ಮಾತನಾಡಿದ ಶಾಸಕ ಎಂ.ವೈ ಪಾಟೀಲ್, ದೇವಲ ಗಾಣಗಾಪೂರದ ಬ್ಯಾರೇಜ್ ಗೇಟ್ ಹಾಳಾಗಿ ನೀರು ಪೋಲಾಗುತ್ತಿರುವುದನ್ನು ತಡೆದು ನೀರು ನಿಲ್ಲಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಈ ವೇಳೆ ತಹಸೀಲ್ದಾರ್‌ ಸಂಜೀವಕುಮಾರ ದಾಸರ್, ಪಿಎಸ್‌ಐ ರಾಹುಲ್ ಪವಾಡೆ, ಪ್ರತಿಭಟನಾಕಾರರಾದ ಅಣ್ಣಾರಾವ ಪಾಟೀಲ, ತಿಮ್ಮರಾಯ ಚಿಂಚೋಳಿ, ಮಾಳಪ್ಪ ಬಿದನೂರ, ಮಾಳಪ್ಪ ದೊಡ್ಮನಿ, ಅವಧೂತ ಮೂರನೆತ್ತಿ, ದಿಗಂಬರ ಕಾಡಪ್ಪಗೋಳ, ಶರಣಗೌಡ ಬಟಗೇರಿ ಸೇರಿದಂತೆ ಅನೇಕರು ಇದ್ದರು.