ಮಾಗೋಡ ಗ್ರಾಮದ ರಿ.ಸ.ನಂ. 11ಎ ಮತ್ತು 13ಎ ವ್ಯಾಪ್ತಿಯ ಸರ್ಕಾರಿ ಗೋಮಾಳ ಹಾಗೂ ಹುಲ್ಲುಗಾವಲು ಜಮೀನನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಹಾಗೂ ಅದರಲ್ಲಿ ಯಾರಿಗೂ ಅವೈಜ್ಞಾನಿಕವಾಗಿ ಹಕ್ಕುಪತ್ರ, ನಿವೇಶನ ನೀಡುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಣಿಬೆನ್ನೂರು: ತಾಲೂಕಿನ ಮಾಗೋಡ ಗ್ರಾಮದ ರಿ.ಸ.ನಂ. 11ಎ ಮತ್ತು 13ಎ ವ್ಯಾಪ್ತಿಯ ಸರ್ಕಾರಿ ಗೋಮಾಳ ಹಾಗೂ ಹುಲ್ಲುಗಾವಲು ಜಮೀನನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಹಾಗೂ ಅದರಲ್ಲಿ ಯಾರಿಗೂ ಅವೈಜ್ಞಾನಿಕವಾಗಿ ಹಕ್ಕುಪತ್ರ, ನಿವೇಶನ ನೀಡುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಮಾಗೋಡ ಗ್ರಾಮದ ಗೋಮಾಳ ಉಳಿಸಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.
1979-80ರಿಂದ ವಿವಿಧ ಸರ್ಕಾರಿ ಯೋಜನೆಗಳಿಗಾಗಿ ಗೋಮಾಳ ಮತ್ತು ಹುಲ್ಲುಗಾವಲು ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಇದನ್ನು ವಿರೋಧಿಸಿ ಗ್ರಾಮಸ್ಥರು ಕರ್ನಾಟಕ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಗೋಮಾಳ ವ್ಯಾಪ್ತಿಯಲ್ಲಿ ಕೆಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಈ ಹಿಂದೆ ಸರ್ಕಾರದಿಂದ ನಿವೇಶನ ಪಡೆದು ಮನೆ ನಿರ್ಮಿಸಿಕೊಂಡು ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮತ್ತೆ ಗೋಮಾಳದಲ್ಲಿ ನಿವೇಶನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡಿರುವ ಕೆಲವರು ಈಗಾಗಲೇ ಮಾಗೋಡ ಗ್ರಾಮದಲ್ಲಿ ಆಸ್ತಿ ಹಾಗೂ ನಿವೇಶನ ಹೊಂದಿದ್ದಾರೆ. ಕೆಲವರು ಸರ್ಕಾರಿ ನೌಕರಿಯಲ್ಲಿಯೂ ಇದ್ದಾರೆ. ಇಂತಹವರನ್ನು ನಿವೇಶನ ರಹಿತ ಫಲಾನುಭವಿಗಳೆಂದು ಪರಿಗಣಿಸಿ ಗೋಮಾಳದಲ್ಲಿ ಹಕ್ಕುಪತ್ರ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡಿರುವ ಕೆಲವರು 2010-11ರಲ್ಲೇ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ರನ್ನು ಪ್ರತಿವಾದಿಗಳನ್ನಾಗಿ ಮಾಡಿ ಮನೆ, ನಿವೇಶನಗಳನ್ನು ಸಕ್ರಮಗೊಳಿಸುವಂತೆ ರಾಣಿಬೆನ್ನೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2013ರಲ್ಲಿ ನ್ಯಾಯಾಲಯ ದಾವೆಯನ್ನು ವಜಾಗೊಳಿಸಿದ್ದು, ಜಮೀನು ಗೋಮಾಳವಾಗಿಯೇ ಉಳಿಯಬೇಕೆಂಬ ಆದೇಶವಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ಮಾಗೋಡ ಗ್ರಾಮದ ಹಲವು ಕುಟುಂಬಗಳಿಗೆ ಸೂಕ್ತ ಮನೆಗಳಿಲ್ಲದಿದ್ದರೂ ಗೋಮಾಳವನ್ನು ಅತಿಕ್ರಮಿಸದೆ ಇರುವ ಜಾಗದಲ್ಲಿಯೇ ವಾಸಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಪರಿಗಣಿಸಿ ರಿ.ಸ.ನಂ. 11ಎ ಮತ್ತು 13ಎ ಜಮೀನನ್ನು ಗೋಮಾಳವಾಗಿಯೇ ಉಳಿಸಬೇಕು. ಹೊರಗಿನವರಿಗೆ ಅಥವಾ ಅರ್ಹತೆ ಇಲ್ಲದವರಿಗೆ ಹಕ್ಕುಪತ್ರ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿದೆ.
ಚನ್ನಬಸನಗೌಡ ಮುದಿಗೌಡ್ರ, ಉಜ್ಜಪ್ಪ ಕಮದೋಡ, ಅಜ್ಜಪ್ಪ ಹಾಲಬಾವಿ, ನಿಜಲಿಂಗಪ್ಪ ಹಾದಿಮನಿ, ರೇವಣೆಪ್ಪ ಕರೇಗೌಡ್ರ, ನಿಂಗನಗೌಡ ಮುದಿಗೌಡ್ರ, ಮಹೇಶ ಮಲ್ಲಾಪುರ, ಹನುಮಂತಪ್ಪ ಕರ್ಜಗಿ, ಬಸಪ್ಪ ಹೊಸಗೌಡ್ರ, ರಾಮನಗೌಡ ಮುದಕನಗೌಡ್ರ, ಗುಡ್ಡಪ್ಪ ಪಾಟೀಲ, ನಾಗಪ್ಪ ಬಸನಗೌಡ್ರ, ಮಲ್ಲಕಪ್ಪ ಬ್ಯಾನಪ್ಪನವರ, ಜಗದೀಶ ಮಲ್ಲಾಪುರ, ಭೀಮಪ್ಪ ಹುಣಿಸಿಕಟ್ಟಿ, ರಾಮಪ್ಪ ಓಲೇಕಾರ, ಸಂತೋಷ ಶಿದ್ದಪ್ಪನವರ, ರೇವಣೆಪ್ಪ ಬೆನಕನಗೊಂಡ, ಗಿರೀಶ ಮುದಿಗೌಡ್ರ, ಸೋಮನಗೌಡ ಹಾಲಬಾವಿ, ನಿಂಗರೆಡ್ಡಿ ಕೆಂಚರೆಡ್ಡಿ, ಹನುಮಂತಪ್ಪ ಕೊಪ್ಪದ, ಶೇಖಪ್ಪ ಬಲ್ಲೂರ, ಕರಿಮಸಾಬ್ ಕಿಲ್ಲೇದಾರ, ರಾಮಪ್ಪ ಮುದಿಗೌಡ್ರ, ಶಿವಲಿಂಗಪ್ಪ ಮುದಿಗೌಡ್ರ, ಬಸನಗೌಡ್ರ ಪಾಟೀಲ, ಹನುಮಂತಪ್ಪ ಮಜ್ಜಿಗಿ, ಭೀಮರೆಡ್ಡಿ ಕೆಂಚರೆಡ್ಡಿ, ಹನುಮಂತಪ್ಪ ಮುದಕನಗೌಡ್ರ, ಧರ್ಮಪ್ಪ ಕೊಪ್ಪದ, ಶಿದ್ದಪ್ಪ ಅಮಾಸಿ, ಶಿವಪ್ಪ ಮುದಿಗೌಡ್ರ, ಮಲ್ಲೇಶಪ್ಪ ಹೊಸಳ್ಳಿ, ಕುರುವತೆಪ್ಪ ಕರ್ಜಗಿ ಮತ್ತಿತರರಿದ್ದರು.