ಸಾರಾಂಶ
ನಗರಸಭೆ ಎದುರು ನೂರಾರು ಸಿಕ್ಕಲಗಾರ ಸಮಾಜದ ಯುವಕರು, ಮಹಿಳೆಯರು, ಜಮಾಯಿಸಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಿಕ್ಕಲಗಾರ ಸಮಾಜದ ಜನರು ಶವಸಂಸ್ಕಾರ ಮಾಡಲು ಒಂದು ಎಕರೆಯಷ್ಟು ಸ್ಥಳವಿದೆ. ಕೇವಲ ಅರ್ಧ ಕಿ.ಮೀ ಸ್ಮಶಾನಕ್ಕೆ ಹೋಗಲು ಅಂದಾಜು ೩ ಕಿ.ಮೀ ಕ್ರಮಿಸಬೇಕು. ಶವ ತೆಗೆದುಕೊಂಡು ಹೋಗಲು ಅನ್ಯ ಮಾರ್ಗವಿಲ್ಲ. ರಬಕವಿ ನಗರದ ಸಿಕ್ಕಲಕಾರ ಸಮಾಜ ಅನೇಕ ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು ದಾರಿ ನೀಡಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ನಮಗೆ ಸತತ ಅನ್ಯಾಯವಾಗುತ್ತಿದೆ ಎಂದು ಶೇಖರ ಹಳಿಂಗಳಿ ಆರೋಪಿಸಿದರು.ಸಿಕ್ಕಲಕಾರ ಸಮಾಜದ ಲಕ್ಕಪ್ಪ ಜಡೆಪ್ಪಾ ಸಿಕ್ಕಲಗಾರ (೬೦) ಶನಿವಾರ ಬೆಳಗ್ಗೆ ನಿಧನರಾಗಿದ್ದು, ಮೃತರ ಅಂತ್ಯಕ್ರಿಯೆ ಸಲುವಾಗಿ ರುದ್ರಭೂಮಿಗೆ ಹೋಗಲು ದಾರಿ ಇಲ್ಲದ ಕಾರಣ ನಗರಸಭೆ ಎದುರು ಶವವಿಟ್ಟು ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿ ಶೇಖರ ಹಳಿಂಗಳಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ನಗರಸಭೆ ಎದುರು ನೂರಾರು ಸಿಕ್ಕಲಗಾರ ಸಮಾಜದ ಯುವಕರು, ಮಹಿಳೆಯರು, ಜಮಾಯಿಸಿ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿದರು. ಪೌರಾಯುಕ್ತರು ಬರುವವರೆಗೂ ಹೋರಾಟ ನಡೆಸಿದ ಮುಖಂಡರು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದು ಬಿಗಿ ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ನಾನು ಕಾನೂನಿನಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಡಿಸಿಯವರ ಆದೇಶದಂತೆ ಆ ಸ್ಥಳಕ್ಕೆ ಹೋಗಲು ವಿದ್ಯಾನಗರ ಹಾಗೂ ಸ.ನಂ. ೬೪ರ ಮುಖಾಂತರ ಅಂದರೆ ಅಂದಾಜು ೩ ಕಿ.ಮೀ ಕ್ರಮಿಸಬೇಕು ಎಂದರು. ಆದರೆ ಕೇವಲ ಅರ್ಧ ಕಿಮೀ ದೂರದಲ್ಲಿರುವ ಸ್ಮಶಾನಕ್ಕೆ ಅಷ್ಟೊಂದು ಸುತ್ತುವರೆದು ಹೋಗುವುದಾಗದ ಕಾರಣ ಮದನಮಟ್ಟಿ ಗ್ರಾಮದ ರಸ್ತೆ ಮೂಲಕ ಹೋಗುವಾಗ ಪಕ್ಕದಲ್ಲೆ ಸರ್ಕಾರದ ಹಳ್ಳದ ಜಾಗವಿದ್ದು, ಅದರ ಪಕ್ಕದಲ್ಲಿ ರಸ್ತೆ ಮಾಡಿಕೊಡಿ ಎಂದು ಪಟ್ಟು ಹಿಡಿದರು. ಅದಕ್ಕೆ ಅಧಿಕಾರಿಗಳು ಬಗ್ಗದೆ ಇದ್ದಾಗ, ಶವವನ್ನು ತಂದು ನಗರಸಭೆ ಮುಂದೆ ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.ಆಗ ಅಧಿಕಾರಿಗಳ ತಂಡ ತಕ್ಷಣ ಹೋರಾಟಗಾರರಿಗೆ ಸ್ಪಂದಿಸಿ ಸ್ಮಶಾನಕ್ಕೆ ದಾರಿ ಮಾಡಿಕೊಡುವುದಾಗಿ ಹೇಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭರವಸೆ ನೀಡಿದರು.
ಕಾಮಗಾರಿಗೆ ಸಮಯ ಹೆಚ್ಚಿಗೆ ಪಡೆಯುವುದರಿಂದ ತಾತ್ಕಾಲಿಕವಾಗಿ ರಬಕವಿ ಹಳಿಂಗಳಿ ನಾಕಾದ ಪಕ್ಕದಲ್ಲಿರುವ ಹಿಂದೂ ರುದ್ರಭೂಮಿ ಪಕ್ಕದಲ್ಲಿ ಅಂತ್ಯಕ್ರೀಯೆ ಮಾಡಲಾಯಿತು. ಮೃತನಿಗೆ ಪತ್ನಿ, ಎರಡು ಗಂಡು ೪ ಜನ ಹೆಣ್ಣುಮಕ್ಕಳು ಇದ್ದಾರೆ. ಪ್ರತಿಭಟನೆಯಲ್ಲಿ ಶೇಖರ ಹಳಿಂಗಳಿ, ಸುನೀಲ ಸಿಕ್ಕಲಗಾರ, ದಶಗೀರ ಸಿಕ್ಕಲಗಾರ, ಬಾಬು ಕಿಲ್ಲೇದಾರ, ಹನುಮಂತ ಸಿಕ್ಕಲಗಾರ ಸೇರಿದಂತೆ ನೂರಾರು ಸಂಖ್ಯೆಯ ಹಿರಿಯರು, ಮಹಿಳೆಯರು ಪಾಲ್ಗೊಂಡಿದ್ದರು.ಮದನಮಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಹಳ್ಳದ ಝರಿನೀರಿನ ಸ್ಥಳದ ಪಕ್ಕದಲ್ಲಿಂದ ಸ್ಮಶಾನಕ್ಕೆ ಹೋಗಲು ದಾರಿಮಾಡಿಕೊಡಲಾಗುವುದು. ಇಂದಿನಿಂದಲೇ ಜೆಸಿಬಿ ಯಿಂದ ಕೆಲಸ ಪ್ರಾರಂಭಿಸಿ ಅನುಕೂಲಮಾಡಿಕೊಡಲಾಗುವುದು.
ಜಗದೀಶ ಈಟಿ. ಪೌರಾಯುಕ್ತರು, ನಗರಸಭೆ ರಬಕವಿ ಬನಹಟ್ಟಿ