ಸಾರಾಂಶ
ತಾತಯ್ಯ ಅವರ ಕೊಡುಗೆ ಜಿಲ್ಲೆ ಮಾತ್ರವಲ್ಲ, ರಾಜ್ಯಕ್ಕೆ ಮಾದರಿಯಾಗಿದ್ದು ಎಲ್ಲಾ ಜನಸಮುದಾಯ ಆರಾಧಿಸುವ ಸಂತರು. ಅವರ ಹೆಸರು ಇಡುವುದರಿಂದ ಎಲ್ಲರಿಗೂ ಖುಷಿ ಆಗಲಿದೆ. ವೇದಿಕೆಯ ಮನವಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಶಾಸಕರು ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಮ್ಮ ಆಧ್ಯಾತ್ಮಿಕ ಸಾಧನೆ ಮೂಲಕ ಜಿಲ್ಲೆಯ ಕೀರ್ತಿಯನ್ನು ವಿಶ್ವದ ದಶದಿಕ್ಕುಗಳಿಗೆ ಪಸರಿಸುವಂತೆ ಮಾಡಿರುವ ಯೋಗಿವರೇಣ್ಯ ಕೈವಾರ ತಾತಯ್ಯ ನವರ ಹೆಸರನ್ನು ಜಿಲ್ಲಾಕೇಂದ್ರದಲ್ಲಿರುವ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಮಗ್ರ ಬಲಿಜ ವೇದಿಕೆ ರಾಜ್ಯಾಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆ ಮಾತನಾಡಿದ ಮುನಿಕೃಷ್ಣಪ್ಪ, ಕೈವಾರ ಶ್ರೀಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿರುವುದರಿಂದ ಜಿಲ್ಲೆಯ ಬಸ್ ನಿಲ್ದಾಣಕ್ಕೆ ಶ್ರೀಯೋಗಿನಾರೇಯಣ ಯತೀಂದ್ರರ ಬಸ್ ನಿಲ್ದಾಣ ಎಂದು ಹೆಸರಿಡುವುದು ಸೂಕ್ತ ಎಂದರು.
ಹೆಸರಿಡಲು ಯಾರೂ ವಿರೋಧವೂ ಇಲ್ಲಸರ್ವಧರ್ಮ ಸಮನ್ವಯಕಾರರಾಗಿ ತಾತಯ್ಯ ಮಾಡಿರುವ ಸಾಧನೆ ಅಪಾರ. ಇವರ ಹೆಸರನ್ನು ಇಡಲು ಮುಂದಾದರೆ ವಿರೋಧಿಸುವವರು ಯಾರೂ ಇಲ್ಲ. ಜಿಲ್ಲೆಯ ಎಲ್ಲಾ ತಾಲೂಕಿನ ಜನರು ಸಹಿ ಮಾಡಿರುವ ಪತ್ರವನ್ನು ನಿಮಗೆ ಅರ್ಪಿಸುತ್ತಿದ್ದೇವೆ. ಚಿಕ್ಕಬಳ್ಳಾಪುರಕ್ಕೂ ಕೂಡ ತಾತಯ್ಯ ಭೇಟಿ ನೀಡಿದ ದಾಖಲೆಯಿದೆ. ಇದೇ ರೀತಿ ಜಿಲ್ಲಾಡಳಿತ ಭವನದ ಜಾಗದಲ್ಲಿ ತಾತಯ್ಯನವರ ದೇವಾಲಯ ಕಟ್ಟಲು ಅವಕಾಶ ನೀಡಬೇಕು ಎಂದು ಸಹ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ತಾತಯ್ಯ ಅವರ ಕೊಡುಗೆ ಜಿಲ್ಲೆ ಮಾತ್ರವಲ್ಲ, ರಾಜ್ಯಕ್ಕೆ ಮಾದರಿಯಾಗಿದ್ದು ಎಲ್ಲಾ ಜನಸಮುದಾಯ ಆರಾಧಿಸುವ ಸಂತರು. ಅವರ ಹೆಸರು ಇಡುವುದರಿಂದ ಎಲ್ಲರಿಗೂ ಖುಷಿ ಆಗಲಿದೆ. ನಿಮ್ಮ ಮನವಿಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ವಾಗ್ದಾನ ನೀಡಿದರು.ಜಿಲ್ಲಾಧಿಕಾರಿಗೂ ಮನವಿ ಸಲ್ಲಿಕೆ
ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸಹಾ ಮನವಿಪತ್ರ ನೀಡಿ, ಬಸ್ ನಿಲ್ದಾಣಕ್ಕೆ ತಾತಯ್ಯ ಹೆಸರಿಡುವುದು, ಜಿಲ್ಲಾಡಳಿತ ಭವನದ ಆವರಣದಲ್ಲಿ ಜಾಗ ನೀಡಲು ಮನವಿ ಮಾಡಿದರು. ಈ ವೇಳೆ ಬಲಿಜ ಸಂಘಟನೆಯ ಮೋಹನ್‌ಮುರಳಿ, ಶಿವಕುಮಾರ್,ಕೋಲಾಟ್ಲು ರಾಮಚಂದ್ರಪ್ಪ,ನಕ್ಕನಹಳ್ಳಿ ಮಂಜುನಾಥ್,ಕುಪ್ಪಹಳ್ಳಿ ರಾಜೇಂದ್ರ,ನಡುಪಲ್ಲಿ ನಾಗರಾಜ್,ಅಮರ್‌ನಾಥ್,ರಾಮಾನುಜಮ್,ವೇಣುಗೋಪಾಲ್,ಶಿಡ್ಲಘಟ್ಟ ಯೋಗಿನಾರೇಯಣ ತಾತಾ ಸಮಿತಿಯ ಶ್ರೀನಾಥ್, ಶಂಕರ್ ಮತ್ತಿತರರು ಇದ್ದರು.