ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಸಂಸ್ಮರಣೆಗೊಳಿಸಲು, ಮುಂದಿನ ತಲೆಮಾರಿಗೆ ಶ್ರೀಗಳ ಹಿರಿಮೆ, ಸಾಧನೆ ಪರಿಚರಿಸಲು ನವೀಕರಣಗೊಳ್ಳುತ್ತಿರುವ ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ್ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು. ಸೋಮವಾರ ನಗರದ ರೈಲ್ವೆ ನಿಲ್ದಾಣದ ಬಳಿ ಜಿಲ್ಲಾ ಕನ್ನಡ ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಮುಖಂಡರು, ಮಂಗಳವಾರ ನಡೆಯುವಶ್ರೀಗಳ 118ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು ಇಡುವ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ತಂಗನಹಳ್ಳಿಯ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನ ಮಠದ ಬಸವ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿಗಳು ನಾಡಿಗೆ ಮಾಡಿದ ಸೇವೆ ಅಪಾರ. ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರಿಗೆ ಬದುಕಿಗೆ ಬೆಳಕಾಗಿದ್ದಾರೆ. ಅಂತಹ ಮಹನೀಯರ ಹೆಸರನ್ನು ಶಾಶ್ವತಗೊಳಿಸಬೇಕು, ರೈಲು ನಿಲ್ದಾಣಕ್ಕೆಅವರ ಹೆಸರು ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಲಾಷೆಯೂ ಈ ನಿಲ್ದಾಣಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಬೇಕು ಎಂಬುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಪೂರಕ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು. ಮುಖಂಡ ಕೋರಿ ಮಂಜುನಾಥ್, ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಪಿ.ಎನ್.ರಾಮಯ್ಯ, ಆರ್.ಎನ್.ವೆಂಕಟಾಚಲ, ಕೊಪ್ಪಳ್ ನಾಗರಾಜ್, ಕನ್ನಡ ಪ್ರಕಾಶ್, ಹೊಸಕೋಟೆ ನಟರಾಜು, ಗುರು ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು. ನಂತರ ಬೇಡಿಕೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.