ಸಾರಾಂಶ
ನಗರದ ಚಿಕ್ಕ ಮಾರುಕಟ್ಟೆ ಬಳಿಯ ಪ್ರಧಾನ ಅಂಚೆ ಕಛೇರಿಯ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಗೃಹ ಕಳೆದ ಐದಾರು ತಿಂಗಳಿನಿಂದಲೂ ಮುಚ್ಚಿದ್ದು ನಗರಸಭೆ ಕೂಡಲೆ ಶೌಚಗೃಹ ತೆರೆದು ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಚಿಕ್ಕ ಮಾರುಕಟ್ಟೆ ಬಳಿಯ ಪ್ರಧಾನ ಅಂಚೆ ಕಛೇರಿಯ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಗೃಹ ಕಳೆದ ಐದಾರು ತಿಂಗಳಿನಿಂದಲೂ ಮುಚ್ಚಿದ್ದು ನಗರಸಭೆ ಕೂಡಲೆ ಶೌಚಗೃಹ ತೆರೆದು ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ರಸ್ತೆಯಲ್ಲಿ ಹಳೆ ತರಕಾರಿ ಮಾರುಕಟ್ಟೆ, ಆಸ್ಪತ್ರೆಗಳು, ಮಟನ್ ಮಾರುಕಟ್ಟೆ ಸೇರಿದಂತೆ ಅಂಚೆ ಕಚೇರಿಯಿದ್ದು ಇಲ್ಲಿಗೆ ಪ್ರತಿನಿತ್ಯ ತಮ್ಮ ವ್ಯಾಪಾರ ವಹಿವಾಟಿಗೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಹೋಗುತ್ತಾರೆ. ನಗರಸಭೆ ವತಿಯಿಂದ ಇಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಶೌಚಗೃಹವನ್ನು ನಿರ್ಮಿಸಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಏಕಾಏಕಿ ಶೌಚಗೃಹವನ್ನು ಮುಚ್ಚಲಾಗಿದೆ. ಇಲ್ಲಿಗೆ ಬರುವ ವ್ಯಾಪರಸ್ಥರು, ಗ್ರಾಹಕರು ಶೌಚಗೃಹವಿಲ್ಲದೆ ಪರದಾಡುವಂತಾಗಿದ್ದು ಬಯಲು ಶೌಚಗೃಹವೇ ಗತಿಯಾಗಿದೆ. ಮಹಿಳೆಯರು, ಮಕ್ಕಳು, ವಯಸ್ಸಾದವರು ಶೌಚಕ್ಕೆ ಅನ್ಯಮಾರ್ಗ ಬಳಸುವಂತಾಗಿದೆ. ಇದರಿಂದ ಶೌಚಗೃಹದ ಅಕ್ಕಪಕ್ಕ ಗುಬ್ಬುನಾರುತ್ತಿದ್ದು ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು ಇಲ್ಲಿ ತರಕಾರಿ ಇತರೆ ವ್ಯಾಪಾರ ಮಾಡುವವರ ಸ್ಥಿತಿ ಹೇಳತೀರದಾಗಿದೆ. ಉಪವಿಭಾಗ ಕೇಂದ್ರವಾಗಿರುವ ತಿಪಟೂರು ನಗರಕ್ಕೆ ನಿತ್ಯ ಜನಸಂದಣೆ ಹೆಚ್ಚುತ್ತಿದ್ದರೂ ಶೌಚಗೃಹ ವ್ಯವಸ್ಥೆ ಇಲ್ಲದಿರುವುದು ನಗರಕ್ಕೆ ಕಪ್ಪು ಚುಕ್ಕಿ ಇಟ್ಟಂತಾಗಿದೆ. ಕೂಡಲೆ ನಗರಸಭೆ ಎಚ್ಚೆತ್ತುಕೊಂಡು ಮುಚ್ಚಿರುವ ಶೌಚಗೃಹವನ್ನು ತೆರೆದು ಸ್ವಚ್ಚ ಶೌಚಗೃಹ ವ್ಯವಸ್ಥೆ ಕಲ್ಪಿಸಿಕೊಡಬೇಕೆಂಬುದು ಸಾರ್ವಜನಿಕರ ಪರವಾಗಿ ಬಿಜೆಪಿ ಮುಖಂಡ ಕೆ.ಎಸ್.ಸದಾಶಿವಯ್ಯ ಒತ್ತಾಯಿಸಿದ್ದಾರೆ.