ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆ
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ದಬ್ಬೇಘಟ್ಟದಲ್ಲಿ ಡಿಸಿಸಿ ಬ್ಯಾಂಕಿನ ಶಾಖೆಯನ್ನು ತೆರೆಯಬೇಕೆಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಎಂ.ಡಿ.ರಮೇಶ್ ಗೌಡ ಆಗ್ರಹಿಸಿದ್ದಾರೆ.ಜಿಲ್ಲಾ ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕೊಡಗೀಹಳ್ಳಿ ಸಿದ್ದಲಿಂಗಪ್ಪನವರನ್ನು ಅಭಿನಂದಿಸಿದ ವೇಳೆ ಅವರು ನೂತನ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು. ದಬ್ಬೇಘಟ್ಟ ಹೋಬಳಿ ತಾಲೂಕು ಕೇಂದ್ರವಾಗಿರುವ ತುರುವೇಕೆರೆಗೆ ಸುಮಾರು 18 ಕಿಮೀ ಆಗಲಿದೆ. ದಬ್ಬೇಘಟ್ಟ ಸುತ್ತಮುತ್ತ ಹತ್ತಾರು ಹಳ್ಳಿಗಳೂ ಇದ್ದು ಜನರು ಹಣಕಾಸಿನ ವ್ಯವಹಾರ ಮಾಡಲು ತೊಂದರೆಯಾಗುತ್ತಿದೆ. ಇಲ್ಲಿ ಹಲವಾರು ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳೂ ಸೇರಿದಂತೆ ಹಲವಾರು ಹಣಕಾಸಿನ ವಹಿವಾಟು ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ದಬ್ಬೇಘಟ್ಟ ಹೋಬಳಿ ಕೇಂದ್ರಕ್ಕೆ ಹೊಸದಾಗಿ ಡಿಸಿಸಿ ಬ್ಯಾಂಕ್ ನ ಶಾಖೆಯನ್ನು ತೆರೆಯಬೇಕೆಂದು ಎಂ.ಡಿ.ರಮೇಶ್ ಗೌಡ ನೂತನ ನಿರ್ದೇಶಕ ಸಿದ್ದಲಿಂಗಪ್ಪನವರನ್ನು ಒತ್ತಾಯಿಸಿದ್ದಾರೆ. ಕಳೆದ ಬಾರಿಯೂ ಸಿದ್ದಲಿಂಗಪ್ಪನವರು ಡಿಸಿಸಿ ಬ್ಯಾಂಕ್ ಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ತಾಲೂಕಿನ ಸಹಕಾರ ಸಂಘಗಳಿಗೆ ಉತ್ತಮ ಸೇವೆ ನೀಡಿರುವ ಹಿನ್ನೆಲೆಯಲ್ಲಿ ಜನರೇ ಮತ್ತೊಮ್ಮೆ ಸಿದ್ದಲಿಂಗಪ್ಪನವರನ್ನು ಪುನರಾಯ್ಕೆ ಮಾಡಿದ್ದಾರೆ. ಈ ಬಾರಿಯೂ ಸಹ ಸಿದ್ದಲಿಂಗಪ್ಪನವರಿಂದ ಉತ್ತಮ ಸೇವೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಎಂ.ಡಿ.ರಮೇಶ್ ಗೌಡ ಆಶಾಭಾವನೆ ವ್ಯಕ್ತಪಡಿಸಿದರು. ರಮೇಶ್ ಗೌಡರ ಮನವಿಗೆ ಸ್ಪಂದಿಸಿದ ಸಿದ್ದಲಿಂಗಪ್ಪ ತಾವು ಜಿಲ್ಲಾ ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ, ಮಾಜಿ ಸಚಿವರೂ ಆಗಿರುವ ಕೆ.ಎನ್. ರಾಜಣ್ಣನವರ ಗಮನಕ್ಕೆ ತಂದು ಶೀಘ್ರದಲ್ಲೇ ದಬ್ಬೇಘಟ್ಟಕ್ಕೆ ಡಿಸಿಸಿ ಬ್ಯಾಂಕ್ ನ ಶಾಖೆಯನ್ನು ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಈ ವೇಳೆ ಪಟ್ಟಣ ಪಂಚಾಯಿತಿಯ ನಾಮಿನಿ ಸದಸ್ಯ ರುದ್ರೇಶ್, ವೀರಶೈವ ಮುಖಂಡ ಮಂಜುನಾಥ್, ಹೋಟೆಲ್ ಕುಮಾರ್, ಗೋವಿಂದರಾಜು, ಭೈರಪ್ಪ, ಬಸವಣ್ಣ, ದೊಡ್ಡಮನೆ ಮಂಜುನಾಥ್, ಸೇರಿದಂತೆ ಹಲವರು ಇದ್ದರು.