ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾಡಳಿತ, ನಗರಸಭೆ, ರೈಲ್ವೆ ಇಲಾಖೆ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗದಗ: ನಗರದ ಅಬ್ದುಲ್‌ಕಲಾಂ ಶಾದಿ ಮಹಲ್ ಹತ್ತಿರದ ರೈಲ್ವೆ ಕೆಳ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆಳ ಸೇತುವೆ ಎರಡು ಕಮಾನು ಇದ್ದು ಒಂದು ಕಮಾನಿನಲ್ಲಿ ಬೆಟಗೇರಿಯಿಂದ ಗದಗ ಭಾಗಕ್ಕೆ ಬರುವ ಮಳೆನೀರು ಹರಿದು ಹೋಗಲು ಅವಕಾಶ ಕಲ್ಪಿಸಿದ್ದು, ಅದಕ್ಕೆ ಹೊಂದಿಕೊಂಡಿರುವ ಇನ್ನೊಂದು ಕಮಾನಿನ ಮೂಲಕ ಕಳೆದ ೫೦ ವರ್ಷಗಳಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಕೂಲಿಕಾರ್ಮಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಈ ಮಾರ್ಗವಾಗಿ ಸಂಚರಿಸುತ್ತ ಬಂದಿದ್ದಾರೆ. 2008ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ರಿಂಗ್ ರೋಡ್‌ನ ನಕ್ಷೆಯ ಪ್ರಕಾರ ಗದಗ- ಬೆಟಗೇರಿ ನಗರಸಭೆ ಇದೇ ಕಮಾನನ್ನು ಮಾನದಂಡವಾಗಿ ಇಟ್ಟುಕೊಂಡು ಕಮಾನು ಹೊರತುಪಡಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ. 2018ರಲ್ಲಿ ರೈಲ್ವೆ ಇಲಾಖೆಯು ಈ ಕಮಾನುಗಳಿಗೆ ಹೊಂದಿಕೊಂಡು ನೂತನವಾಗಿ ಇನ್ನೆರಡು ಕಮಾನ್‌ಗಳನ್ನು ನಿರ್ಮಿಸಿ ಕಮಾನಿನ ಕೆಳಗೆ ಜನಸಂಚಾರಕ್ಕೆ ಅನುಕೂಲ ಒದಗಿಸಲು 3- 4 ಅಡಿ ಮಣ್ಣು ತೆಗೆದು ಕಾಂಕ್ರೀಟ್ ಹಾಕಿ ಭದ್ರಗೊಳಿಸಿ ಸಂಚಾರಕ್ಕೆ ಸುಗಮ ಮಾಡಿದ್ದಾರೆ.ಹಾಗೂ ಕಮಾನಿನ ಎಡ ಮತ್ತು ಬಲ ಭಾಗಕ್ಕೆ ಕಬ್ಬಿಣದ ಆ್ಯಂಗ್ಲರ್‌ದಿಂದ 5.43 ಮೀಟರ್(17.8 ಅಡಿ)ಗಿಂತ ಹೆಚ್ಚಿನ ಎತ್ತರದ ವಾಹನಗಳು ಸಂಚರಿಸದಂತೆ ನಿರ್ಬಂಧಿಸಿ 5.43 ಮೀಟರ್(17.8 ಅಡಿ)ಗಿಂತ ಒಳಗಿನ ವಾಹನಗಳು ಸಂಚರಿಸಲು ಸೂಚನಾ ಫಲಕವನ್ನು ರೈಲ್ವೆ ಇಲಾಖೆ ಅಳವಡಿಸಿದೆ.

ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸುಗಮ ಸಂಚಾರಕ್ಕೆ ಅನುಕೂಲವಿದೆ ಎಂದು ತಿಳಿದುಕೊಂಡು ಈ ಭಾಗದಲ್ಲಿ ಮನೆ, ವಾಣಿಜ್ಯ ಮಳಿಗೆ, ಅಬ್ದುಲ್‌ಕಲಾಂ ಶಾದಿಮಹಲ್, ಸರಸ್ವತಿ ಕಲ್ಯಾಣಮಂಟಪ, ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ಮುಂತಾದವುಗಳು ನಿರ್ಮಾಣಗೊಂಡಿವೆ. ಗದಗ- ಬೆಟಗೇರಿ ನಗರಸಭೆಯ ವಾರ್ಡ್ ನಂ. 6 ಹಾಗೂ ವಾರ್ಡ 11 ಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ.ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾಡಳಿತ, ನಗರಸಭೆ, ರೈಲ್ವೆ ಇಲಾಖೆ ಅಗತ್ಯ ತುರ್ತು ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಮಾಜಿ ಸದಸ್ಯ ಅಮೀನಸಾಬ ಕಾಗದಾರ, ಶರಣಪ್ಪ ಗದ್ದಿಕೇರಿ ಆಗ್ರಹಿಸಿದ್ದಾರೆ.