ಸಾರಾಂಶ
ಕ್ರಿಶ್ಚಿಯನ್ ಮಿಷಿನರಿಗಳು ಹಿಂದೂಗಳಿಗೆ ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಧಾರವಾಡ ನಗರದ ಲಕ್ಷ್ಮಿ ಸಿಂಗನಕೇರಿಯಲ್ಲಿ ಮತಾಂತರ ಮಾಡುವಾಗ ಮಿಷಿನರಿಗಳನ್ನು ಸಾಕ್ಷಿ ಸಮೇತರಾಗಿ ಹಿಡಿದು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈವರೆಗೂ ಕ್ರಮವಾಗಿಲ್ಲ.
ಹುಬ್ಬಳ್ಳಿ: ವಿವಿಧ ಆಮಿಷಗಳನ್ನು ಒಡ್ಡಿ ಕ್ರಿಶ್ಚಿಯನ್ ಮಿಷಿನರಿಗಳು ಧಾರವಾಡದಲ್ಲಿ ಮತಾಂತರ ಮಾಡುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧಾರವಾಡದ ಹಿಂದೂಪರ ಸಮಾಜದ ಮುಖಂಡರು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಮಿಷನರ್ ಎನ್. ಶಶಿಕುಮಾರ ಅವರನ್ನು ಭೇಟಿಯಾದ ಮುಖಂಡರು, ಕ್ರಿಶ್ಚಿಯನ್ ಮಿಷಿನರಿಗಳು ಹಿಂದೂಗಳಿಗೆ ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುತ್ತಿದ್ದಾರೆ. ಧಾರವಾಡ ನಗರದ ಲಕ್ಷ್ಮಿ ಸಿಂಗನಕೇರಿಯಲ್ಲಿ ಮತಾಂತರ ಮಾಡುವಾಗ ಮಿಷಿನರಿಗಳನ್ನು ಸಾಕ್ಷಿ ಸಮೇತರಾಗಿ ಹಿಡಿದು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈವರೆಗೂ ಕ್ರಮವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ದೂರು ಕೊಟ್ಟರೂ ಎಫ್‌ಐಆರ್ ದಾಖಲಾಗಿಲ್ಲ. ಮತಾಂತರ ತಡೆದಿದ್ದಕ್ಕೆ ಚರ್ಚ್ ಮೇಲೆ ದಾಳಿ ಮಾಡಲಾಗಿದೆ ಎಂದು ತಮಗೆ ನಮ್ಮ ವಿರುದ್ಧ ದೂರು ನೀಡಿದ್ದಾರೆ. ಖಾಸಗಿ ಜಾಗೆಯಲ್ಲಿ ಮಾಡುತ್ತಿದ್ದ ಮತಾಂತರ ಅದ್ಹೇಗೆ ಚರ್ಚ್ ಆಗುತ್ತದೆ? ಪೊಲೀಸರನ್ನು ಕರೆದುಕೊಂಡು ಹೋಗಿಯೇ ಅದನ್ನು ತಡೆದಿತ್ತು. ಅವರೇ ನಮ್ಮ ಧರ್ಮದ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ದೂರಿನ ಮೇಲೆ ಕೂಡಲೇ ಎಫ್‌ಐಆರ್ ದಾಖಲಿಸಿ ಕ್ರಿಶ್ಚಿಯನ್ ಮಿಷಿನರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಮಿಷನರ್ ಶಶಿಕುಮಾರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ವೇಳೆ ಮಹೇಶ ಪಾಟೀಲ, ವೀರೇಶ ಕೆಲಗೇರಿ, ಕೇದಾರನಾಥ ಚವ್ಹಾಣ, ಸುನಿಲ ಹೊಂಗಲ, ಮಂಜುನಾಥ ಶಿಗ್ಗಾವಿ ಸೇರಿದಂತೆ ಹಲವರಿದ್ದರು.