ಸಾರಾಂಶ
- ಮೀನುಗಾರರ ವಿವಿಧ ಸಹಕಾರ ಸಂಘಗಳ ಒತ್ತಾಯ । ದಂಟರಮಕ್ಕಿ, ಮಾಗಡಿ, ಹಿರೇಮಗಳೂರು ದೊಡ್ಡ ಕೆರೆಗಳ ಸಂರಕ್ಷಣೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ವಿವಿಧ ಕೆರೆಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ ಕಾಮಗಾರಿ ತಡೆಗಟ್ಟುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಶ್ರೀ ಗಂಗಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮೀನುಗಾರಿಕೆ ವಿವಿಧೋದ್ದೇಶ ಸಹಕಾರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.ಈ ಸಂಬಂಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರನ್ನು ಗುರುವಾರ ಭೇಟಿ ಮಾಡಿದ ಎರಡೂ ಸಂಘಟನೆ ಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ನಗರದ ದಂಟರಮಕ್ಕಿ ಕೆರೆಯನ್ನು ಮೀನುಗಾರಿಕೆ ಇಲಾಖೆಯವರು ಮೀನುಗಾರರಿಗೆ ಹರಾಜಿನಲ್ಲಿ ನೀಡಿದ್ದಾರೆ. ಆದರೆ, ಕೆರೆ ಏರಿ ರಸ್ತೆಯ ಕೋಡಿಯನ್ನು ಸಂಪೂರ್ಣವಾಗಿ ಒಡೆದು ಹಾಕಿ ನೀರನ್ನು ಖಾಲಿ ಮಾಡಿದ್ದಾರೆ. ಜೆಸಿಬಿ ಯಂತ್ರಗಳಿಂದ ಕೆರೆಯಲ್ಲಿ ಅಡ್ಡಾ ದಿಡ್ಡಿ ಮಣ್ಣು ತೆಗೆದು ಆಳವಾದ ಗುಂಡಿಗಳನ್ನು ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ ಇದರಿಂದಾಗಿ ಹಣ ತೆತ್ತು ಹರಾಜಿನಲ್ಲಿ ಕೆರೆಯನ್ನು ಪಡೆದಿರುವ ಮೀನು ಗಾರರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು. ದಂಟರಮಕ್ಕಿ ಕೆರೆಯಲ್ಲಿ ಅಕ್ರಮವಾಗಿ ಆಳವಾಗಿ ಗುಂಡಿ ತೆಗೆಯುತ್ತಿರುವುದನ್ನು ತಡೆದು ಮೀನುಗಾರರು ಸಾರ್ವಜನಿಕರು ಪ್ರಾಣಿ ಪಕ್ಷಿಗಳು ಮತ್ತು ಜಾನುವಾರುಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು, ಕೆರೆ ಹೂಳನ್ನು ಸಮತಟ್ಟಾಗಿ ತೆಗೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮಾಗಡಿ ದೊಡ್ಡ ಕೆರೆಯಲ್ಲಿ ಪ್ರಾಣಿ ಪಕ್ಷಿಗಳು ಮೀನು ಮರಿಗಳು ಮತ್ತು ಜಾನುವಾರುಗಳಿಗೆ ಮೀಸಲಿಟ್ಟಿರುವ ನೀರನ್ನು ಪಂಪ್ ಸೆಟ್‌ಗಳಿಂದ ಖಾಲಿ ಮಾಡುತ್ತಿದ್ದಾರೆ, ಟ್ರ್ಯಾಕ್ಟರ್ ಮತ್ತು ಟಿಪ್ಪರ್ ಲಾರಿಗಳ ಮೂಲಕ ಇಲಾಖೆಯಿಂದ ಅನುಮತಿ ಪಡೆಯದೆ ಅಡ್ಡಾದಿಡ್ಡಿಯಾಗಿ ಕೆರೆ ಮಣ್ಣನ್ನು ತೆಗೆದು ಸಾಗಿಸುತ್ತಿದ್ದಾರೆ ಎಂದು ದೂರಿದರು. ಹಿರೇಮಗಳೂರಿನ ದೊಡ್ಡ ಕೆರೆಯನ್ನು ಕಳೆದ ಹತ್ತು ವರ್ಷಗಳಿಂದ ಅಂತರಗಂಗೆ ಮತ್ತು ಜೊಂಡುಗಿಡ ಸಂಪೂರ್ಣವಾಗಿ ಆವರಿಸಿದೆ ಇದರಿಂದಾಗಿ ಕೆರೆ ಗುತ್ತಿಗೆ ಪಡೆದಿರುವ ಮೀನುಗಾರರಿಗೆ ಮೀನು ಹಿಡಿಯಲು ಸಾಧ್ಯವಾಗುತ್ತಿಲ್ಲ. ನಗರದ ಕೊಳಚೆ ನೀರು, ತ್ಯಾಜ್ಯ ವಸ್ತುಗಳನ್ನು ನೇರವಾಗಿ ಕೆರೆಗೆ ಬಿಡುತ್ತಿರುವುದರಿಂದಾಗಿ ಮೀನುಗಳು ಸಾಯುತ್ತಿವೆ ಗುತ್ತಿಗೆ ಪಡೆದವರಿಗೆ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಕೆ.ಸಿ. ವಸಂತಕುಮಾರ್, ಶ್ರೀಗಂಗಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮೀನುಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಿ. ಧರ್ಮೇಶ್, ದಸಂಸ ಸಂಘಟನಾ ಸಂಚಾಲಕರಾದ ಎಂ.ಸಿ. ಜಯರಾಮಣ್ಣ, ಇಲಿಯಾಜ್ ಅಹಮದ್, ಕೆಂಚಪ್ಪ, ತಾಲೂಕು ಸಂಚಾಲಕ ವಿನೋದ್, ಟಿ.ಎಲ್. ಗಣೇಶ್, ಸಂಘದ ನಿರ್ದೇಶಕರಾದ ರಾಮಯ್ಯ, ಅಣ್ಣಯ್ಯ, ಟಿ. ರಾಮಚಂದ್ರ, ಮಂಜುನಾಥ್, ಕಾರ್ಯದರ್ಶಿ ಸುರೇಶ್ ಹಾಜರಿದ್ದರು.
1 ಕೆಸಿಕೆಎಂ 2ಚಿಕ್ಕಮಗಳೂರಿನ ದಂಟರಮಕ್ಕಿ, ಮಾಗಡಿ, ಹಿರೇಮಗಳೂರು ದೊಡ್ಡ ಕೆರೆಗಳ ಸಂರಕ್ಷಣೆಗೆ ಆಗ್ರಹಿಸಿ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.