ಹೆಬ್ಬಾರಗುಡ್ಡಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ

| Published : Mar 13 2025, 12:48 AM IST

ಸಾರಾಂಶ

ಹೆಬ್ಬಾರಗುಡ್ಡಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಆಗ್ರಹ

ಕಾರವಾರ: ಅಂಕೋಲಾ ತಾಲೂಕಿನ ಹೆಬ್ಬಾರಗುಡ್ಡ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸೋಮವಾರ ಸ್ಥಳೀಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

ಈ ಗ್ರಾಮವು ಅಂಕೋಲಾ ತಾಲೂಕಿನ ಡೋಗ್ರಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತಿದ್ದು, ಗ್ರಾಮಕ್ಕೆ ತೆರಳಲು ಸರ್ವಋತು ರಸ್ತೆಯಿಲ್ಲ. ಗ್ರಾಮದಲ್ಲಿ ಅಂಗನವಾಡಿ, ಶಾಲೆ ವ್ಯವಸ್ಥೆ ಸರಿಯಿಲ್ಲ. ಈಗಾಗಲೇ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದರೆ ಯಾರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ೫೦ಕ್ಕೂ ಅಧಿಕ ಕುಟುಂಬಗಳು ವಾಸವಾಗಿದ್ದು, ಮೂಲಭೂತ ಸೌಕರ್ಯ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಊರಿಗೆ ತೆರಳಲು ಸರ್ವಋತು ರಸ್ತೆಯಿಲ್ಲದೇ ಯಾರಾದರೂ ಅನಾರೋಗ್ಯಕ್ಕೊಳಗಾದರೆ ಆಸ್ಪತ್ರೆಗೆ ಜೋಳಿಗೆ ಕಟ್ಟಿ ಸಾಗಿಸುವ ಪರಿಸ್ಥಿತಿಯಿದೆ. ಇಲ್ಲಿನ ಮಳಗಾಂವದಿಂದ ಹೆಬ್ಬಾರಗುಡ್ಡದ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೂ ಕೆಲಸ ಮಾತ್ರ ಪ್ರಾರಂಭಿಸಿಲ್ಲ. ಹೀಗಿದ್ದಾಗ್ಯೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಕಾಮಗಾರಿಗೆ ಟೆಂಡರ್ ಪಡೆದವರ ಗುತ್ತಿಗೆ ರದ್ದುಮಾಡಿ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಸ್ಥಳೀಯರ ಸಮಸ್ಯೆಗಳನ್ನು ಅರಿತು ಆದಷ್ಟು ಶೀಘ್ರದಲ್ಲಿ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದೇ ಇದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಛಾಯಾ ಗಾಂವಕರ, ಶೇಷ ಗಾಂವಕರ, ಸೀತಾ ಸಿದ್ದಿ, ದಯಾನಂದ ಸಿದ್ದಿ, ಬಾಬು ಸಿದ್ದಿ, ನಾಗರಾಜ ಬಾಂದಿ, ಸುರೇಶ ಸಿದ್ದಿ ಇದ್ದರು.