ಸಾರಾಂಶ
ಹೊನ್ನಾವರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಸುಧಾರಣೆ, ಶೌಚಾಲಯ ನಿರ್ಮಾಣ ಮಾಡಬೇಕು. ಅಲ್ಲದೇ ಪಟ್ಟಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಮತ್ತು ಬೀದಿದೀಪ ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಆಗ್ರಹಿಸಿ ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ಪಪಂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರಭಾತ ನಗರ ಫಾರೆಸ್ಟ್ ಕಾಲನಿ ಸುತ್ತಮುತ್ತ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಮತ್ತು ಬೀದಿದೀಪ ಅಳವಡಿಸುವುದು. ಬಂದರಿನ ಸುತ್ತಮುತ್ತ ಕಾಂಕ್ರಿಟ್ ರಸ್ತೆ ನಿರ್ಮಾಣ. ರಾಯಲಕೇರಿ ಸುತ್ತ ಮುತ್ತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕು. ಬೀದಿ ವ್ಯಾಪಾರಿಗಳಿಗೆ ಒಂದೇ ಸೂರಿನಡಿ ಸ್ಥಳಾವಕಾಶ ಕಲ್ಪಿಸಬೇಕು. ಮಾರ್ಕೆಟ್‍ನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಪ್ರಭಾತನಗರ ಹಾಗೂ ಬಂದರು ಪ್ರದೇಶದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಿಸಬೇಕು ಎಂದು ಆಗ್ರಹಿಸಲಾಯಿತು.
ಪಟ್ಟಣದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಸಂತೆ ನಡೆಯುವ ಸ್ಥಳದಲ್ಲಿ ಮತ್ತು ಬಜಾರ್‌ನಲ್ಲಿ ಪೊಲೀಸರನ್ನು ನೇಮಿಸಬೇಕು. ರಜತಗಿರಿ ಹಾಗೂ ಕೆಎಚ್‌ಬಿ ಕಾಲನಿಯಲ್ಲಿ ಬೀದಿದೀಪ ಅಳವಡಿಸಬೇಕು. ಒಂದು ವರ್ಷದಿಂದ ಕೆಟ್ಟಿರುವ ಗೇರಸೊಪ್ಪಾ ಸರ್ಕಲ್ ಮತ್ತು ಟಿಪ್ಪರ್ ಹಾಲ್ ಸರ್ಕಲ್‍ಗಳಲ್ಲಿಯ ಹೈಮಾಸ್ಟ್ ದೀಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಲಾಯಿತು.ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು ಮನವಿ ಸ್ವೀಕರಿಸಿದರು. ಈ ವೇಳೆ ಸಂಘಟನೆಯ ಪ್ರಮುಖರು ಇದ್ದರು.