ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಪಟ್ಟಣದ ವಾರ್ಡ್ ನಂ. ೧೮ರಲ್ಲಿಯ ಸಿದ್ದರಾಮೇಶ್ವರ ನಗರದಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಜನ ಪರದಾಡುವಂತಾಗಿದೆ. ಅನೇಕ ಬಾರಿ ಪಪಂ ಮುಖ್ಯಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಶನಿವಾರ ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಅವರಿಗೆ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹಸನ್ ತಹಸೀಲ್ದಾರ್ ನೇತೃತ್ವದಲ್ಲಿ ಲಿಖಿತ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಹಸನ್ ತಹಸೀಲ್ದಾರ್ ಮಾತನಾಡಿ, ಸಿದ್ದರಾಮೆಶ್ವರ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಪ್ರಮುಖವಾಗಿ ನಿತ್ಯ ಸಂಚರಿಸಲು ಸುಗಮ ರಸ್ತೆ ಕೂಡ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಈ ಕುರಿತಂತೆ ಅನೇಕ ಬಾರಿ ವಾರ್ಡಿನ ಮಹಿಳೆಯರು ಪ್ರತಿಭಟನೆ ನಡೆಸಿ ತುರ್ತು ಎಲ್ಲ ಸೌಲಭ್ಯ ಕಲ್ಪಿಸಿ ಕೊಡುವಂತೆ ಅಧಿಕಾರಿಗಳ ಗಮನ ಸೆಳೆದಿದ್ದು, ಬರೀ ಕುಂಟು ನೆಪ ಹೇಳುತ್ತಾ ಜನರ ಅಗತ್ಯ ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.೧೮ನೇ ವಾರ್ಡಿನ ಪಪಂ ಸದಸ್ಯರಾದ ಅನಿತಾ ಬಾರಬರ ಅವರೂ ಕೂಡ ಪಪಂ ಸಾಮಾನ್ಯ ಸಭೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿ ಕೊಡುವಂತೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಗಮನ ಸೆಳೆದಿದ್ದು, ಸಿದ್ದಾರಾಮೇಶ್ವರ ನಗರಕ್ಕೆ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಯಾವುದೇ ಸೌಲಭ್ಯವನ್ನು ಕಲ್ಪಿಸಿಲ್ಲ ಎಂದು ಆರೋಪಿಸಿದರು.
ಸಿದ್ದರಾಮೇಶ್ವರ ನಗರದಲ್ಲಿ ಹೊಸದಾಗಿ ನಿವೇಶನಗಳು ನಿರ್ಮಾಣವಾಗಿದ್ದು, ವೇಗವಾಗಿ ಬೆಳೆಯುತ್ತಿದೆ. ಆದರೆ ಸೌಲಭ್ಯಗಳು ಮಾತ್ರ ಇಲ್ಲದಾಗಿದೆ. ರಸ್ತೆ ಅಕ್ಕ ಪಕ್ಕದಲ್ಲಿ ಜಾಲಿ ಕಂಠಿಗಳು ಬೆಳೆದಿದ್ದು, ಹಾವು ಚೇಳುಗಳ ಕಾಟದಿಂದಾಗಿ ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದಾರೆ.ಇದೇ ನಗರದಲ್ಲಿ ನವೋದಯ ತರಬೇತಿ ಕೇಂದ್ರವಿದ್ದು, ಇಲ್ಲಿ ತರಬೇತಿ ಪಡೆಯುತ್ತಿರುವ ಚಿಕ್ಕ ಚಿಕ್ಕ ಮಕ್ಕಳು ಭಯದಲ್ಲಿಯೇ ಸಂಚರಿಸುವಂತಾಗಿದೆ. ಪಟ್ಟಣ ಪಂಚಾಯಿತಿಯವರು ನೀರು ಸರಬರಾಜಿಗೆ ಪೈಪ್‌ಲೈನ್ ಜೋಡಣೆ ಮಾಡಿದ್ದು, ಕಾಮಗಾರಿ ಅಪೂರ್ಣವಾಗಿದ್ದರಿಂದ ಇಲ್ಲಿನ ಜನತೆ ಕುಡಿಯುವ ನೀರು ಮತ್ತು ದಿನ ಬಳಕೆಗೆ ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದು, ಬಡಾವಣೆ ನಿರ್ಮಾಣವಾದಾಗಿನಿಂದಲೂ ಜನ ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ದೂರಿದರು.
ನೂತನ ಬಡಾವಣೆಯಲ್ಲಿ ಹೊಸ ಮನೆಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿದ್ದು, ಪಟ್ಟಣ ಪಂಚಾಯಿತಿಗೆ ಹೆಚ್ಚು ತೆರಿಗೆ ತುಂಬುತ್ತಿದ್ದರೂ ಯಾವುದೇ ಸೌಲಭ್ಯ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಪ್ರತಿ ವರ್ಷವೂ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿದ್ದರೂ ಇಲ್ಲಿನ ನಿವಾಸಿಗಳು ಮಾತ್ರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಸಿದ್ದರಾಮೇಶ್ವರ ನಗರದ ಪಕ್ಕದಲ್ಲಿಯೇ ಬರುವ ಬೇಂದ್ರೆ ಅವರ ಪ್ಲಾಟುಗಳಲ್ಲಿಯೂ ಇದೇ ಸಮಸ್ಯೆ ಇದ್ದು, ಬೇಸಿಗೆಗೂ ಮುನ್ನವೇ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ಮನವಿ ನೀಡಿ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಅವರು ಮಾತನಾಡಿ, ಆದಷ್ಟು ಬೇಗನೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಕ್ರಮ ತೆಗೆದುಕೊಳ್ಳುವಾಗಿ ಭರವಸೆ ನೀಡಿದರು. ಈ ವೇಳೆ ಅಜ್ಜಪ್ಪ ಬಿಡವೆ, ಫಕ್ಕೀರೇಶ ಗಾಮನಗಟ್ಟಿ, ಶರೀಪ ಗುಡಿಮನಿ, ಪ್ರಕಾಶ ಬಾರಬರ, ಸಾದಿಕ ಮುಳಗುಂದ, ಶಿವರಾಜ ದೋಟ್ಯಾಳ, ಮಂಜುನಾಥ ಕೆಂಪಳ್ಳಿ, ಗುರುನಾಥ ಬಡಿಗೇರ ಸೇರಿ ಅನೇಕರು ಇದ್ದರು.