ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಹಳ್ಳದ ಕೇರಿ ಓಣಿಯ ಹತ್ತಿರ ಇರುವ ವೀರಶೈವ ರುದ್ರಭೂಮಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಲಕ್ಷ್ಮೇಶ್ವರ ತಾಲೂಕು ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ ಆಗ್ರಹಿಸಿದ್ದಾರೆ.
ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು. ಈ ಸ್ಮಶಾನದಲ್ಲಿ ಗಿಡಗಂಟಿಗಳು ಹಾಗೂ ತ್ಯಾಜ್ಯವಸ್ತುಗಳು, ಮುಳ್ಳು ಬೆಳೆದಿದ್ದು, ಶವ ಸಂಸ್ಕಾರಕ್ಕೆ ಹೋಗಲು ತುಂಬಾ ತೊಂದರೆಯಾಗಿದೆ ಎಂದು ಹೇಳಿದ್ದಾರೆ.ಪಟ್ಟಣದಲ್ಲಿನ ವೀರಶೈವ ರುದ್ರಭೂಮಿಗಳು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸರ್ಕಾರ ವೀರಶೈವ ಲಿಂಗಾಯತ ರುದ್ರಭೂಮಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಇದರಿಂದ ವೀರಶೈವ ರುದ್ರಭೂಮಿಗಳ ಸ್ವಚ್ಛತೆ ಮಾಡಲು ಹಾಗೂ ನಿರ್ವಹಣೆ ಮಾಡಲು ಅಸಾಧ್ಯವಾಗಿದೆ. ಅಲ್ಲದೆ ಈ ರುದ್ರಭೂಮಿಗೆ ಹೊಂದಿಕೊಂಡು ವೀರಗಂಗಾಧರ ಸರ್ಕಾರಿ ಪ್ರೌಢಶಾಲೆ ಇದ್ದು, ಇಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ರುದ್ರಭೂಮಿ ಶಾಲೆಯ ಪಕ್ಕದಲ್ಲಿ ಇರುವುದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ಶಾಲೆಯ ಆವರಣದಲ್ಲಿ ಹಾವು, ಹುಳ-ಹುಪ್ಪಡಿಗಳು ಬರುತ್ತಿವೆ. ಆದ ಕಾರಣ ರುದ್ರಭೂಮಿಯ ಸುತ್ತ ಕಾಂಪೌಂಡ್ ನಿರ್ಮಿಸಿ ಹಾಗೂ ಸ್ವಚ್ಛಗೊಳಿಸಬೇಕು. ಶವ ಸಂಸ್ಕಾರಕ್ಕೆ ಹೊಸ ವಾಹನ ಖರೀದಿಸಬೇಕು ಹಾಗೂ ಲೈಟ್ ವ್ಯವಸ್ಥೆ ಮಾಡದೆ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಊರಿನ ಎಲ್ಲ ನಾಗರಿಕರ ಜತೆ ಸೇರಿ ಪುರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಶಂಕ್ರಣ್ಣ ಬ್ಯಾಡಗಿ, ನಾಗಣ್ಣ ಚಿಂಚಲಿ, ಗಿರೀಶ ಅಗಡಿ, ಬಸವರಾಜ ಗೊಡಿ, ಪ್ರಕಾಶ ಮಾದ್ನೂರ, ಹೊನ್ನಪ್ಪ ವಡ್ಡರ, ಸಿ.ಆರ್. ಲಕ್ಕುಂಡಿಮಠ, ಶಾಂತಣ್ಣ ಯರ್ಲಗಟ್ಟಿ, ಮಂಜುನಾಥ ಒಂಟಿ, ಬೇವಿನಮರ, ಪಾಟೀಲ, ಪವನ ಬಂಕಾಪುರ, ಸಾಗರ ಕಲಾಲ, ಅಭಯ್ ಕುಮಾರ ಜೈನ್ ಇದ್ದರು.