ಸಾರಾಂಶ
ಜಮೀನುಗಳಿಗೆ 2016ರಲ್ಲಿ ಖುಷ್ಕ ಪರಿಹಾರ ಕೊಡಲಾಗಿದೆ. ಕೇವಲ 500 ಎಕರೆ ಜಮೀನಿಗೆ ಪರಿಹಾರ ನೀಡಿದ್ದು, ಬಾಕಿ ಜಮೀನುಗಳಿಗೂ ಭೂ ಪರಿಹಾರ ಹಣ ಕೊಡದೇ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ. ಪೂರ್ಣ ಪ್ರಮಾಣದ ಪರಿಹಾರಧನ ಸಿಗುವ ತನಕ ಮತ್ತು ನಮ್ಮ ಬೇಡಿಕೆಗಳನ್ನು ಈಡೇರುವ ತನಕ ಯಾವುದೇ ಕಾಮಗಾರಿ ಆರಂಭಿಸಬಾರದು ಎಂದು ಆಗ್ರಹಿಸಿದರು.
ಹುಬ್ಬಳ್ಳಿ: ಧಾರವಾಡದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 2010-11ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ 3230 ಎಕರೆ 03 ಗುಂಟೆ ಜಮೀನವನ್ನು ಸ್ವಾಧೀನಪಡಿಸಿಕೊಂಡಿದ್ದು, ಎಲ್ಲ ರೈತರಿಗೆ ಪರಿಹಾರ ವಿತರಿಸುವ ವರೆಗೆ ಸ್ಥಳದಲ್ಲೇ ಯಾವುದೇ ಕಾಮಗಾರಿ ಆರಂಭಿಸಬಾರದು ಎಂದು ರೈತರು ಆಗ್ರಹಿಸಿದ್ದಾರೆ.
ಇಲ್ಲಿನ ಕೆಐಎಡಿಬಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ ಮುಳವಾಡ ಗ್ರಾಮದ ರೈತ ಮುಖಂಡರು ಮಾತನಾಡಿ, ಆಗ ಬೃಹತ್ ಕೈಗಾರಿಕೆ ಹಾಗೂ ಆಹಾರ ಉತ್ಪಾದನಾ ಘಟಕದ ಸ್ಥಾಪನೆಗಾಗಿ ಜಮೀನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ವರೆಗೂ ಯಾವುದೇ ಕೈಗಾರಿಕೆ ಅಥವಾ ಆಹಾರ ಉತ್ಪಾದನಾ ಘಟಕ ಆರಂಭವಾಗಿಲ್ಲ.ಜಮೀನುಗಳಿಗೆ 2016ರಲ್ಲಿ ಖುಷ್ಕ ಪರಿಹಾರ ಕೊಡಲಾಗಿದೆ. ಕೇವಲ 500 ಎಕರೆ ಜಮೀನಿಗೆ ಪರಿಹಾರ ನೀಡಿದ್ದು, ಬಾಕಿ ಜಮೀನುಗಳಿಗೂ ಭೂ ಪರಿಹಾರ ಹಣ ಕೊಡದೇ ಕಾಮಗಾರಿಯನ್ನು ಪ್ರಾರಂಭ ಮಾಡಿದ್ದಾರೆ. ಪೂರ್ಣ ಪ್ರಮಾಣದ ಪರಿಹಾರಧನ ಸಿಗುವ ತನಕ ಮತ್ತು ನಮ್ಮ ಬೇಡಿಕೆಗಳನ್ನು ಈಡೇರುವ ತನಕ ಯಾವುದೇ ಕಾಮಗಾರಿ ಆರಂಭಿಸಬಾರದು ಎಂದು ಆಗ್ರಹಿಸಿದರು.
ಇದೇ ವೇಳೆ 2010ರಲ್ಲಿ ಜಿಎಂಸಿ ಮಾಡಿದ ಗಿಡ-ಮರಗಳು, ಮನೆಗಳು, ಕೊಳವೆಬಾವಿಗಳು, ಬಾವಿಗಳಿದ್ದು, ಅವೆಲ್ಲವುಗಳನ್ನು ಪರಿಗಣಿಸಿ 2022-23ನೇ ಸಾಲಿನ ವ್ಯಾಲುವೇಶನ್ ಪ್ರಕಾರ ಪರಿಹಾರ ನೀಡಬೇಕು. ಅಧಿಕಾರಗಳ ಲೋಪದೋಷಗಳಿಂದ ಜಿಎಂಸಿಯಲ್ಲಿ ಕೈಬಿಟ್ಟ ಮರಗಳಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಭೂಮಿ ಕಳೆದುಕೊಂಡ ರೈತನ ಕುಟುಂಬಕ್ಕೆ ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ವಿತರಿಸಬೇಕು, ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ವಿದ್ಯಾರ್ಹತೆಯ ಆಧಾರದ ಮೇಲೆ ಸೂಕ್ತ ಸರ್ಕಾರಿ ನೌಕರಿ ನೀಡಬೇಕು, ಭೂ ಪರಿಹಾರ ನೀಡುವಲ್ಲಿ ತಾರತಮ್ಯವಾಗಿದ್ದರಿಂದ ಹೆಚ್ಚುವರಿಯಾಗಿ ಪ್ರತಿ ಎಕರೆಗೆ ₹2,50,000 ಕೊಡಬೇಕು, ತಾವು ಕಳೆದುಕೊಂಡ ಜಮೀನಿನಲ್ಲಿ 1 ಎಕರೆ ಜಮೀನನ್ನು ಪರಿಹಾರವಾಗಿ ಕೊಡಬೇಕು, ಪಟ್ಟಣದಲ್ಲಿ ಭೂಮಿ ಖರೀದಿಸಲು ರಿಯಾಯತಿ ನೀಡಬೇಕು ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಒತ್ತಾಯಿಸಿದರು.