ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಬಹುತೇಕ ತೋಟದ ಮನೆಗಳಿಗೆ ಕಳೆದ ಒಂದೆರಡು ತಿಂಗಳಿಂದಲೂ ವಿದ್ಯುತ್ ಇಲ್ಲದೆ ಪರಿತಪಿಸುವಂತಾಗಿದ್ದು ಇದಕ್ಕೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ತೋಟದ ಮನೆಗಳ ತಾಲೂಕು ಹಿತರಕ್ಷಣಾ ಸಮಿತಿ ವತಿಯಿಂದ ಸೋಮವಾರ ನಗರದ ಬೆಸ್ಕಾಂ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.ತೋಟದ ಮನೆಗಳ ಹಿತರಕ್ಷಣಾ ಸಮಿತಿ ಸಂಚಾಲಕ ವಿನಯ್ ಮಡೇನೂರು ಮಾತನಾಡಿ, ಕಳೆದ ಹತ್ತು ದಿನಗಳ ಹಿಂದೆ ಬೆಸ್ಕಾಂ ಇಲಾಖೆ ಮುಂದೆ ನೂರಾರು ರೈತರು ಸಮರ್ಪಕ ವಿದ್ಯುತ್ ನೀಡಬೇಕೆಂದು ಪ್ರತಿಭಟನೆ ನಡೆಸಲಾಗಿತ್ತು. ಸ್ಥಳಕ್ಕೆ ಬಂದಿದ್ದ ಬೆಸ್ಕಾಂ ಅಧಿಕಾರಿಗಳು ನಮಗೆ ಒಂದು ವಾರ ಸಮಯ ಕೊಡಿ. ತೋಟದ ಮನೆಗಳಿಗೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತೇವೆಂದು ಭರವಸೆ ನೀಡಿದ ಕಾರಣ ನಾವು ಪ್ರತಿಭಟನೆಯನ್ನು ಮುಂದುವರಿಸದೆ ಅಧಿಕಾರಿಗಳ ಮಾತಿಗೆ ಬೆಲೆಕೊಟ್ಟು ಹೋದೆವು. ಆದರೆ ಕೊಟ್ಟ ಸಮಯ ಮುಗಿದರೂ ನಮ್ಮ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ತೋಟದ ಮನೆಗಳಲ್ಲಿ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ವಿದ್ಯುತ್ ಇರುವುದಿಲ್ಲ. ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ತೋಟದ ಮನೆಗಳ ಹತ್ತಿರ ಮೋಟರ್, ಪಂಪ್‌ಸೆಟ್, ಕೇಬಲ್ ಕಳ್ಳತನ ಮತ್ತು ಚಿರತೆ ಕಾಟ ಹೆಚ್ಚಾಗಿದ್ದು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಪ್ರತಿನಿತ್ಯ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದ್ದು ನಮ್ಮ ವಿದ್ಯುತ್ ನಮ್ಮ ಹಕ್ಕಾಗಿದ್ದು ಅಧಿಕಾರಿಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸಬಿಟ್ಟು ಮೊದಲಿನಂತೆ ನಿಗದಿತ ಸಮಯದಲ್ಲಿ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಕೊಡುವಂತೆ ಆಗ್ರಹಿಸಿದರು. ರೈತರಾದ ಮಲ್ಲೇನಹಳ್ಳಿ ಮುರುಳೀಧರ್ ಮತ್ತು ಆರ್.ಎಸ್. ನವೀನ್ ಮಾತನಾಡಿ, ವಿದ್ಯುತ್ ಕಣ್ಣಾಮುಚ್ಚಾಲೆಯಾಟದಿಂದ ರೈತರ ಪಾಡು ಹೇಳತೀರದಾಗಿದೆ. ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಈ ವರ್ಷ ನಮಗೆ ಸಮರ್ಪಕ ಮಳೆ ಇದ್ದರೂ ವಿದ್ಯುತ್ ಅಭಾವ ಹೆಚ್ಚಾಗುತ್ತಿದೆ. ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನಿಡಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು, ತಂತಿಗಳು ಹಳೆಯದಾಗಿದ್ದು ನಮಗೆ ಬದಲಾವಣೆ ಮಾಡಿಕೊಡಿ ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ಮನೋಹರ್ ಮಾತನಾಡಿ, ಸರ್ಕಾರ ತೋಟದ ಮನೆಗಳಿಗೆ ಅನುಗುಣವಾಗಿ ವಿದ್ಯುತ್ ನೀಡುವಂತೆ ಅದೇಶ ನೀಡಿದ್ದು ಅದರಂತೆ ವಿದ್ಯುತ್ ನೀಡುತ್ತಿದ್ದೇವೆ. ಹಳೆಯ ವಿದ್ಯುತ್ ಕಂಬಗಳು ಹಾಗೂ ಲೈನ್‌ಗಳನ್ನು ದುರಸ್ಥಿತಿಗೊಳಿಸಲಾಗುವುದು. ಯಾವ ಭಾಗದಲ್ಲಿ ಲೈನ್‌ಮನ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ನಮ್ಮ ಗಮನಕ್ಕೆ ತರಬಹುದು ಎಂದರು. ಪ್ರತಿಭಟನೆಯಲ್ಲಿ ರೇಣುಕಾರಾಧ್ಯ, ಬಸವರಾಜು, ಶಿವಕುಮಾರ್, ತಿಲಕ್, ಚೇತನ್, ಅರುಣ್‌ಕುಮಾರ್, ಗೌಡನಕಟ್ಟೆ ಮನೋಜ್, ನಾಗೇಶ್ ಸೇರಿದಂತೆ ಗೌಡನಕಟ್ಟೆ, ಸೂಗೂರು, ಮಡೇನೂರು ಸೇರಿದಂತೆ ಸಾಕಷ್ಟು ಗ್ರಾಮಗಳ ರೈತರು ಭಾಗವಹಿಸಿದ್ದರು.