ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಆಗ್ರಹ

| Published : Jan 17 2025, 12:48 AM IST

ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಹಗಲು ಮತ್ತು ರಾತ್ರಿ ಕರ್ತವ್ಯ ನಿರ್ವಹಣೆಗೆ ಖಾಯಂ ವೈದ್ಯರನ್ನು ನೇಮಿಸಬೇಕು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಹಗಲು ಮತ್ತು ರಾತ್ರಿ ಕರ್ತವ್ಯ ನಿರ್ವಹಣೆಗೆ ಖಾಯಂ ವೈದ್ಯರನ್ನು ನೇಮಿಸಬೇಕು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಕೊಡಗು ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯಿಸಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಎಚ್‌.ಎಸ್.ಮುತ್ತಪ್ಪ, ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಟೀಕಿಸಿದರು.

ಸುಂಟಿಕೊಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳೀಯ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಆಸ್ಪತ್ರೆಯನ್ನು ಖಾಯಂ ವೈದ್ಯರ ಕೊರತೆ ಕಾಡುತ್ತಿದೆ, ರಾತ್ರಿ ವೇಳೆ ಯಾವುದೇ ವೈದ್ಯರು ಲಭ್ಯವಿಲ್ಲ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಪ್ರವಾಸಿಗರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುತ್ತವೆ. ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತಂದರೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಶುಶ್ರೂಷಕಿಯರು ಇಲ್ಲದ ಪರಿಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾಮಾನ್ಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಹೋಬಳಿ ಹಂತದ ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಮಡಿಕೇರಿ, ಕುಶಾಲನಗರ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿ ವಾಹನಗಳು ಸಂಚರಿಸುತ್ತಿರುತ್ತವೆ. ಆದರೆ ಈ ರಸ್ತೆಯ ಎರಡು ಬದಿಗಳು ಕಾಡು ಗಿಡಗಳಿಂದ ಕೂಡಿದೆ. ಇದರಿಂದಾಗಿ ಪಾದಚಾರಿಗಳು ರಸ್ತೆ ಬದಿಯಲ್ಲಿ ಹೋಗಲು ಸಾಧ್ಯವಾಗದೆ

ಭಯದಿಂದ ರಸ್ತೆಯಲ್ಲೇ ನಡೆಯುವಂತಾಗಿದೆ. ಹಲವು ಬಾರಿ ಪಾದಚಾರಿಗಳಿಗೆ ಅಪಘಾತ ಆಗಿರುವುದಲ್ಲದೆ, ಪ್ರಾಣಹಾನಿಯೂ ಸಂಭವಿಸಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಮತ್ತು ಗ್ರಾ.ಪಂ ರಸ್ತೆ ಬದಿಯ ಕಾಡುಗಳನ್ನು ಕಡಿಸಿ, ಪಾದಚಾರಿಗಳಿಗೆ ನಡೆದಾಡಲು ಅವಕಾಶ ಕಲ್ಪಿಸಬೇಕು, ರಸ್ತೆ ಬದಿಯ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದಿಕೆ ಉಪಾಧ್ಯಕ್ಷ ಎಂ.ಆರ್.ಫಿರೋಜ್ ಕಾರ್ಯದರ್ಶಿ ಎಚ್.ಟಿ.ಬೋಜಪ್ಪ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎನ್.ವಿ.ಸಿದ್ದರಾಜು ಹಾಗೂ ಸುಂಟಿಕೊಪ್ಪ ವಿಭಾಗದ ಅಧ್ಯಕ್ಷ ಹೆಚ್.ಎಸ್.ಖಲೀಲ್ ಇದ್ದರು.