ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ, ಬ್ರಹ್ಮಾವರ, ಮಲ್ಪೆ, ಕಟಪಾಡಿ, ಪಾಂಗಾಳ, ಗುಲ್ವಾಡಿ, ಕಟ್ ಬೆಲ್ತೂರು ಭಾಗದ ನದಿ ತೀರಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರಿಗೆ ಉಚಿತ ಮನೆ, ನಿವೇಶನಗಳನ್ನು ನೀಡುವಂತೆ ಜಿಲ್ಲಾ ಕರಾವಳಿ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯು ಜಿಲ್ಲಾಡಳಿತವನ್ನು ಮನವಿ ಮೂಲಕ ಆಗ್ರಹಿಸಿದೆ.ಹಲವು ವರ್ಷಗಳಿಂದ ಈ ಜನರು ನದಿಗಳಲ್ಲಿ ತೆಪ್ಪಗಳ ಮೂಲಕ ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಕನಿಷ್ಟ ಮೂಲಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಸಮುದಾಯಕ್ಕೆ ಸೇರಿದ ಅವರ ಮೇಲೆ ಅನೇಕ ಬಾರಿ ಸ್ಥಳೀಯರಿಂದ ದೌರ್ಜನ್ಯ ಕೂಡ ನಡೆಯುತ್ತಿದೆ. ಅವರಿಗೆ ಇನ್ನೂ ಗುರುತು ಚೀಟಿ ಸಿಕ್ಕಿಲ್ಲ, ಆದ್ದರಿಂದ ರಾಜ್ಯ ಸಮಾಜ ಕಲ್ಯಾಣ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮದ ಸೌಲಭ್ಯಗಳೂ ಅವರಿಗೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಅಳಲು ವ್ಯಕ್ತಪಡಿಸಲಾಗಿದೆ.
ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಅಲೆಮಾರಿಗಳಾಗಿದ್ದ ಅವರು ಒಂದು ಕಡೆ ನೆಲೆಯೂರಲು ಪ್ರಯತ್ನಿಸುತ್ತಿದ್ದರೂ ಸರ್ಕಾರದ ಅಸಹಕಾರ, ಸ್ಥಳೀಯರ ವಿರೋಧದಿಂದ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಗುಲ್ವಾಡಿಯಲ್ಲಿ ನದಿಯಲ್ಲಿ ಮೀನು ಹಿಡಿದ ಕಾರಣಕ್ಕೆ ಈ ಸಮುದಾಯದ ಮಹಿಳೆ ಮತ್ತು ವೃದ್ಧನ ಮೇಲೆ ಹಲ್ಲೆಯೂ ನಡೆದಿದೆ, ಆದರೆ ಆರೋಪಿಗಳ ಬಂಧನವಾಗಿಲ್ಲ.ನದಿತೀರದಲ್ಲಿ ಗುಡಿಸಲು ಮಳೆ ಪ್ರವಾಹಕ್ಕೆ ಹಾನಿಗೊಳ್ಳುವ, ಗುಡುಗು ಸಿಡಿಲಿಗೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ತಕ್ಷಣ ಈ ಸಮುದಾಯದವರಿಗೆ ನಿವೇಶನಗಳನ್ನು ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
ಅಪರ ಜಿಲ್ಲಾಧಿಕಾರಿ ಮಮತಾದೇವಿ ಮನವಿ ಸ್ವೀಕರಿಸಿದರು. ತಕ್ಷಣಕ್ಕೆ ಈ ಜನರಿಗೆ ಬೇಕಾದ ಟರ್ಪಾಲು, ಸೊಳ್ಳೆ ಪರದೆ ಇತ್ಯಾದಿಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.ಈ ಸಂದರ್ಭ ಸಮಿತಿಯ ಗೌರವ ಸಲಹೆಗಾರ ಸಂತೋಷ್ ಬಜಾಲ್, ಗೌರವಾಧ್ಯಕ್ಷ ಕವಿರಾಜ್ ಎಸ್. ಕಾಂಚನ್, ಅಧ್ಯಕ್ಷ ಶಂಕರ, ಕಾರ್ಯದರ್ಶಿ ರಾಮ ಮತ್ತು ಸದಸ್ಯರಾದ ಸಿದ್ಧಪ್ಪ, ವಿಜಯ, ಲಕ್ಷ್ಮಣ, ವೆಂಕಟೇಶ ಜಯಾಮಾಲ, ದೀಪು, ಮಂಗಳ, ಯಲ್ಲಮ್ಮ, ರೂಪ ಮುಂತಾದವರು ಉಪಸ್ಥಿತರಿದ್ದರು.