ನಷ್ಟಕೊಂಡ ರೈತರಿಗೆ ವಿಮಾ ಪರಿಹಾರ ನೀಡಲು ಆಗ್ರಹ

| Published : Jun 14 2024, 01:02 AM IST

ನಷ್ಟಕೊಂಡ ರೈತರಿಗೆ ವಿಮಾ ಪರಿಹಾರ ನೀಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅನೇಕ ರೈತರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಫಸಲ ಬಿಮಾ ಯೋಜನೆಯನ್ನು ತುಂಬಿದ್ದು, ಅಂತಹ ಅನೇಕ ರೈತರು ಬರಗಾಲದಿಂದ ಮಳೆ ಬಾರದೇ ನಷ್ಟ ಅನುಭವಿಸಿದ್ದಾರೆ. ಫಸಲ ಬಿಮಾ ಯೋಜನೆಯಡಿ ನಷ್ಟಗೊಂಡ ರೈತರಿಗೆ ವಿಮಾ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಅನೇಕ ರೈತರು 2023-24ನೇ ಸಾಲಿನ ಮುಂಗಾರು ಹಂಗಾಮಿನ ಫಸಲ ಬಿಮಾ ಯೋಜನೆಯನ್ನು ತುಂಬಿದ್ದು, ಅಂತಹ ಅನೇಕ ರೈತರು ಬರಗಾಲದಿಂದ ಮಳೆ ಬಾರದೇ ನಷ್ಟ ಅನುಭವಿಸಿದ್ದಾರೆ. ಫಸಲ ಬಿಮಾ ಯೋಜನೆಯಡಿ ನಷ್ಟಗೊಂಡ ರೈತರಿಗೆ ವಿಮಾ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ವಿಮೆ ಹಣ ಬಾರದೇ ಚಿಂತೆಗಿಡಾದ ರೈತರು ಅಧಿಕಾರಿಗಳಿಗೆ ಕೇಳಿದರೆ ಮುಂಗಡ ವಿಮೆ ಹಣ ನೀಡಿದ್ದೇವೆ. ಉಳಿದ ಹಣ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ವರ್ಷ ರಾಜ್ಯ ಸರಕಾರವೇ ಜಿಲ್ಲೆಯ ಎಲ್ಲಾ 13 ತಾಲೂಕುಗಳು ಸಂಪೂರ್ಣ ಬರ ತಾಲೂಕುಗಳೆಂದು ಘೋಷಣೆ ಮಾಡಿದೆ. ಆದರೆ ಫಸಲ ಬಿಮಾ ಯೋಜನೆ ಅಡಿಯಲ್ಲಿ ನಷ್ಟ ಅನುಭವಿಸಿಲ್ಲ ಎಂದು, ನಿಮಗೆ ಪರಿಹಾರ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಇದನ್ನು ಇನ್ನೊಮ್ಮೆ ಪರಿಶೀಲಿಸಿ, ವಿಮೆ ತುಂಬಿದ ಎಲ್ಲಾ ರೈತರಿಗೂ ವಿಮಾ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಕೃಷಿ ಇಲಾಖೆಯ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮಾಡಬೇಕಾಗುವುದು ಎಂದು ಜಂಟಿ ನಿರ್ದೇಶಕರಿಗೆ 15 ದಿನಗಳ ಗಡವು ನೀಡಿ ಮನವಿ ಸಲ್ಲಿಸಿದರು.

ಜಿಲ್ಲೆಯ ಕವಲಗಿ ಗ್ರಾಮದಲ್ಲಿ ಶೇ.91 ನಷ್ಟವಾಗಿದೆ ಎಂದು ಹೇಳುವ ಅಧಿಕಾರಿಗಳು ಕೇವಲ 3 ಕಿ.ಮೀ ಪಕ್ಕದ ಹಡಗಲಿ ಗ್ರಾಮದಲ್ಲಿ ಶೇ.10 ನಷ್ಟವಾಗಿದೆ ಎಂದು ವರದಿ ಕಳಿಸಿದ್ದಾರೆ. ಜುಮನಾಳ, ಡೋಣೂರ, ಎಂಭತ್ನಾಳ, ಬೆಕಿನಾಳ, ಕಲಕೇರಿ ಸೇರಿದಂತೆ ಹಲವಾರು ಗ್ರಾಮಗಳು ವಿಮೆಯಿಂದ ವಂಚಿತವಾಗಿವೆ. ಒಟ್ಟಾರೆಯಾಗಿ ಈ ಫಸಲ ಬಿಮಾ ಯೋಜನೆಯೂ ಅವೈಜ್ಞಾನಿಕವಾದದು ಮತ್ತು ಪಾರದರ್ಶಕವಾಗಿಲ್ಲ. ಇಲ್ಲಿ ವಿಮೆ ಕಂಪನಿಯವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಕೈವಾಡದಿಂದ ವಿಮೆಯಲ್ಲಿ ಸಾಕಷ್ಟು ಪ್ರಮಾಣದ ಮೋಸವಾಗಿದೆ. ಇದು ನಿಲ್ಲಬೇಕು. ಖಾಸಗಿ ವಿಮೆ ಕಂಪನಿಯವರಿಗೆ ಈ ಯೋಜನೆಯಿಂದ ಹೊರಗಿಟ್ಟು ಸರಕಾರವೇ ವಿಮೆ ತುಂಬಿಕೊಳ್ಳಬೇಕು. ಇಲ್ಲ ನಮ್ಮ ಜಿಲ್ಲೆಯಲ್ಲಿ ಫಸಲ ಬಿಮಾ ಯೋಜನೆಯಿಂದ ಕೃಷಿ ಇಲಾಖೆ, ಜಿಲ್ಲಾಡಳಿತ ಪ್ರಚಾರ ನಿಲ್ಲಿಸಿ ಎಂದು ಅವರು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ಹಡಗಲಿ ಅಧ್ಯಕ್ಷ ಅಶೋಕ ಕನ್ನೂರ, ಉಪಾಧ್ಯಕ್ಷ ಬಸವರಾಜ ಹಡಪದ, ಸಿದ್ದನಗೌಡ ಬಿರಾದಾರ, ಮಲಕು ಅಕ್ಕಿಹುಗ್ಗಿ, ಶರಣಬಸು ಇಂಡಿ, ಸುಖಾನಂದ ಗಂಗಶೆಟ್ಟಿ, ಶ್ರೀಕಾಂತ ಬೆಳ್ಳುಬ್ಬಿ, ಈರಪ್ಪ ಅಕ್ಕಿಹುಗ್ಗಿ, ಪರಸು ಚಿಕ್ಕಲಕಿ, ರೇವಣಸಿದ್ದ ಹಾದಿಮನಿ, ರುದ್ರಯ್ಯ ಸ್ಥಾವರಮಠ, ಮಲ್ಲಿಕಾರ್ಜುನ ಬಳವಲದ, ಸಿದ್ದು ಗಂಗಶೆಟ್ಟಿ, ಸಂಗಮೇಶ ಪತ್ತಾರ, ಶರಣಬಸು ಗಂಗಶೆಟ್ಟಿ, ಶ್ರೀಶೈಲ ಕಾಳಗಿ, ಬಸವರಾಜ ಹಜೇರಿ, ಸಂತೋಷ ಹಂಚನಾಳ, ರಾಮ ಪಡಗಾನೂರ, ಯಲ್ಲಪ್ಪ ಕರಬಂಟನಾಳ, ಮಲ್ಲು ಬಿರಾದಾರ, ಸಿದ್ದಯ್ಯ ಮಠಪತಿ, ಭೀಮನಗೌಡ ಬಿರಾದಾರ, ಉಪಸ್ಥಿತರಿದ್ದರು.