ಸಾರಾಂಶ
ಅಕ್ರಮವಾಗಿ ನಡೆಸುತ್ತಿರುವ ಸಾಗುವಳಿ ಜಮೀನುಗಳನ್ನು ದಲಿತ ಸಮುದಾಯದ ಜನರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು
ಧಾರವಾಡ: ದಲಿತರಿಗೆ ಭೂಮಿ, ವಸತಿ ಹಕ್ಕು ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ದಲಿತರ ಮೇಲಿನ ದೌರ್ಜನ್ಯ ಪ್ರಕರಣ ತಡೆಯಬೇಕು, ದಲಿತರಿಗೆ ಅನ್ಯಾಯ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ದಲಿತರು ಸರ್ಕಾರದ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ಸಿಗದೇ ಅಂತತ್ರ ಸ್ಥಿತಿಯಲ್ಲಿದ್ದಾರೆ. ಅಕ್ರಮವಾಗಿ ನಡೆಸುತ್ತಿರುವ ಸಾಗುವಳಿ ಜಮೀನುಗಳನ್ನು ದಲಿತ ಸಮುದಾಯದ ಜನರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ತಾಲೂಕಿನ ಬಾಡ ಗ್ರಾಮ, ಹುಬ್ಬಳ್ಳಿ ತಾಲೂಕು ಭಮ್ಮಸಮುದ್ರ ಗ್ರಾಮದ ಜಮೀನು, ಗಂಜಿಗಟ್ಟಿ, ಸಿಗ್ಗಟ್ಟಿ ಹಾಗೂ ಕಲಘಟಗಿ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ 40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂರಹಿತ ದಲಿತ ಕುಟುಂಬಗಳಿಗೆ ಸಾಗುವಳಿ ಜಮೀನುಗಳ ಹಕ್ಕುಪತ್ರ ನೀಡಿ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಶರೇವಾಡ, ಪ್ರಕಾಶ ಸಿದ್ದಪ್ಪನವರ, ಶಕ್ತರಾಜ ದಾಂಡೇಲಿ, ರೇಹಮಾನ್ ಸಾಬ್ ಮಿಚಣಕಿ, ಭರತ್ ಆರವೇಡ, ಪ್ರವೀಣ್ ಬೇಳಗಾವಕರ್, ರಾಜೇಶ್ವರಿ ದೊಡ್ಡಮನಿ, ಶಕುಂತಲಾ ವಾಲಿಕಾರ ಇದ್ದರು.