ಸಾರಾಂಶ
ಹೋರಾಟ ಸಮಿತಿಯಿಂದ ಸಂಸದ ರಾಜಶೇಖರ್ ಹಿಟ್ನಾಳಗೆ ಮನವಿ
ಕನ್ನಡಪ್ರಭ ವಾರ್ತೆ ಕೊಪ್ಪಳನಿವೇಶನ ಮತ್ತು ವಸತಿ ರಹಿತರ ಸಮಗ್ರ ಸಮೀಕ್ಷೆ ನಡೆಸಿ ಅರ್ಹರಿಗೆ ನಿವೇಶನ ಮತ್ತು ಮನೆ ಒದಗಿಸಲು ಆಗ್ರಹಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಸಂಸದ ರಾಜಶೇಖರ್ ಬಿ. ಹಿಟ್ನಾಳಗೆ ಮನವಿ ಸಲ್ಲಿಸಲಾಯಿತು.
ನಂತರ ಸಮಿತಿಯ ಪ್ರಮುಖರು ಮಾತನಾಡಿ, ದುಡಿಯುವ ಕೈಗಳಿಗೆ ಉದ್ಯೋಗ, ಹೊಟ್ಟೆ ತುಂಬಾ ಊಟ, ನೆಮ್ಮದಿಯಿಂದ ನಿದ್ರಿಸಲು ಸ್ವಂತದ ಒಂದು ಸೂರು ಹೊಂದುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ, ಸರ್ಕಾರ ದುಡಿಯುವ ಕೈಗಳಿಗೆ ಉದ್ಯೋಗ ನೀಡದೆ ಹೊಟ್ಟೆ ತುಂಬಾ ಅನ್ನ ಸಿಗದಂತೆ ಮಾಡಿ ಹಸಿವಿನಿಂದ ನರಳುತ್ತಾ, ಮಲಗಲು ಕೂಡ ಸ್ವಂತ ಮನೆ ಇಲ್ಲದ ಸ್ಥಿತಿಗೆ ಜನರನ್ನು ದೂಡಿದೆ ಎಂದರು.ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ದಿನೇ ದಿನೇ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು, ದಿನನಿತ್ಯ ನಮ್ಮ ಜಲ, ನೆಲ ಹಾಗೂ ಜನರಿಗೆ ಸೇರಬೇಕಾದ ಸಾರ್ವಜನಿಕ ಸಂಪತ್ತನ್ನು ಎಗ್ಗಿಲ್ಲದೇ ಲೂಟಿ ಮಾಡುವುದಕ್ಕೆ ನಮ್ಮ ಸರ್ಕಾರಗಳು ಕಾನೂನು ಬದ್ಧ ಅವಕಾಶ ಮಾಡಿಕೊಡುವೆ. ಇದರೊಂದಿಗೆ ಸರ್ಕಾರದ ಸಂಘ-ಸಂಸ್ಥೆಗಳು, ಮಠ, ಮಂದಿರಗಳು ಹಾಗೂ ವ್ಯಕ್ತಿಗಳಿಗೆ ಈ ನೆಲದ ಕಾನೂನುಗಳನ್ನು ಮೀರಿ ಸರ್ಕಾರ ಭೂಮಿ ಹಂಚಿಕೆ ಮಾಡುತ್ತದೆ. ಆದರೆ ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರ್ಕಾರದ ಬಳಿ ಅಗತ್ಯ ಜಮೀನನ್ನು (ನಿವೇಶನ) ಕೇಳಿದರೆ ಭೂಮಿ ಲಭ್ಯವಿಲ್ಲ ಎನ್ನುವ ಬೇವಾಬ್ದಾರಿ ಉತ್ತರ ಸಿಗುತ್ತದೆ. ಹೀಗಾಗಿ, ನಮ್ಮ ವಸತಿ ಕನಸು ನನಸು ಅಸಾಧ್ಯವಾಗಿದೆ.
ಈ ಮನವಿಗೆ ಸ್ಪಂದಿಸಿ ನಿವೇಶನ ಸಹಿತ ಮನೆ ಮತ್ತು ಜಾಗ ಇದ್ದವರಿಗೆ ಮನೆಗಳನ್ನು ಮಂಜೂರು ಮಾಡಿಸಿ ಎಲ್ಲರಿಗೂ ಸೂರು ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.ಈ ಸಂದರ್ಭ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್, ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ, ಉಪಾಧ್ಯಕ್ಷೆ ರೇಣುಕಾ ನಲವಡೆ, ಸಂಘಟನಾ ಕಾರ್ಯದರ್ಶಿ ಚೈತ್ರಾ ಬುಗಡಿ, ಸಹ ಸಂಘಟನೆ ಕಾರ್ಯದರ್ಶಿ ಗೀತಾ ಮದಕಟ್ಟಿ, ಮುಖಂಡ ಮೌಲಾ ಹುಸೇನ್ ಹಣಗಿ, ಜಗದೀಶ್ ಕಟ್ಟಿಮನಿ, ಆದಿತ್ಯ ಟಿ. ಪಾತ್ರೋಟಿ, ಪ್ರಕಾಶ್ ಎಸ್. ದೇವರಮನಿ ಸೇರಿ ಮುಂತಾದವರಿದ್ದರು.