ಚುನಾವಣೆ ಬಂದಾಗ ಮಾತ್ರ ಪೇಂಟರ್ ಕಾರ್ಮಿಕರು ನೆನಪಾಗುತ್ತಾರೆ. ನಂತರ ಕೇವಲ ಆಶ್ವಾಸನೆಗಳಿಗೆ ಸೀಮಿತವಾಗಿದ್ದೇವೆ.
ಕೊಪ್ಪಳ: ಪೇಂಟರ್ ಕಾರ್ಮಿಕರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘ (ಐ.ಎಫ್.ಟಿ.ಯು. ಸೇರ್ಪಡೆ) ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಅಶೋಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ನಗರಸಭೆ ಕಾರ್ಯಾಲಯಕ್ಕೆ ತೆರಳಿ ಪೌರಾಯುಕ್ತ ವೆಂಕಟೇಶ್ ನಾಗನೂರು ಮೂಲಕ ವಸತಿ ಸಚಿವ ಜಮೀರ ಅಹ್ಮದ್ ಖಾನ್ ಮತ್ತು ಶಾಸಕ ಕೆ.ರಾಘವೇಂದ್ರ ಹಿಟ್ನಾಳಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಪೇಂಟರ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪೇಂಟರ್ ಕಾರ್ಮಿಕರು ಸಂಘಟಿತರಾಗಿ ಕಳೆದ ಸುಮಾರು 14 ವರ್ಷಗಳಿಂದ ನಿರಂತರವಾಗಿ ಆಯಾ ಸರ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡುತ್ತಾ ಬರುತ್ತಿದ್ದರೂ ರಾಜ್ಯ ಸರ್ಕಾರ, ಶಾಸಕರು, ನಗರಸಭೆ ಅಧಿಕಾರಿಗಳು ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಮತ್ತು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೆ. ರಾಜಶೇಖರ್ ಹಿಟ್ನಾಳ ಗೆಲ್ಲಿಸಲಾಗಿದೆ. ಚುನಾವಣೆ ಬಂದಾಗ ಮಾತ್ರ ಪೇಂಟರ್ ಕಾರ್ಮಿಕರು ನೆನಪಾಗುತ್ತಾರೆ. ನಂತರ ಕೇವಲ ಆಶ್ವಾಸನೆಗಳಿಗೆ ಸೀಮಿತವಾಗಿದ್ದೇವೆ. ಹೀಗಾಗಿ ಪೇಂಟರ್ ಕಾರ್ಮಿಕರು ಬಾಡಿಗೆ ಮನೆಯಲ್ಲಿಯೇ ವಾಸ ಮಾಡುವಂತಾಗಿದೆ. ಮನೆಗಳಿಗೆ ದುಬಾರಿ ಬಾಡಿಗೆ ಕೊಡಲು ಆಗುತ್ತಿಲ್ಲ. ಹೀಗಾಗಿ ಬೇಡಿಕೆ ಗಂಭೀರವಾಗಿ ಪರಿಗಣಿಸಿ ಪೇಂಟರ್ ಕಾರ್ಮಿಕರಿಗೆ ವಸತಿ ಯೋಜನೆಯ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಪೇಂಟರ್, ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ, ಖಜಾಂಚಿ ಆಸೀಫ್ ಕಿಲ್ಲೆದಾರ್, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್, ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ತುಕಾರಾಮ್ ಪಾತ್ರೋಟಿ, ಗಾಳೆಪ್ಪ ಮುಂಗೋಲಿ. ಸೈಯ್ಯದ್ ನೂರುಲ್ಲಾ ಖಾದ್ರಿ, ಅನ್ವರ್ ನರೇಗಲ್, ಸುಲೈಮಾನ್ ಸಿಂಧೋಗಿ, ಇಮ್ತಿಯಾಜ್ ಆದೋನಿ, ಆಮದ ಹೊಸಪೇಟೆ, ಖಲಂದರ್ ಗದಗ, ನಜೀರಸಾಬ್ ದಿಡ್ಡಿಕೇರಿ, ಶರಣಪ್ಪ, ಸಾಹೇರಾ ಬಾನು, ಆಮದಸಾಬ್, ರಮ್ಯಾ ಬಸವರಾಜ್ ಮಂಡ್ಯ, ರೇಷ್ಮಾ ಬೇಗಂ, ರಜಾಕ್ ಪೇಂಟರ್, ಪರ್ವಿನ್ ಬೇಗಂ, ಇಕ್ಬಾಲ್ ಸಿದ್ನೆಕೊಪ್ಪ, ವಸತಿ ರಹಿತರ ಸೂರಿಗಾಗಿ ಹೋರಾಟ ಸಮಿತಿಯ ರೇಣುಕಾ ನಲವಡೆ, ರಾಜೇಶ್ವರಿ ಇಟಗಿ, ನಾಗವೇಣಿ, ಮಂಜುಳಾ, ಈರಮ್ಮ ಗೋಟೂರು ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.