ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಆಗ್ರಹ

| Published : Jul 10 2025, 12:46 AM IST

ಸಾರಾಂಶ

ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಇತರೆ ಸ್ಕೀಂ ವರ್ಕರ್‌ಗಳ ಸೇವೆಯನ್ನು ಕಾಯಂಗೊಳಿಸಬೇಕು.

ಹಾವೇರಿ: ಶಾಸನಬದ್ಧ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ಜಿಲ್ಲಾ ಸಮಿತಿ ಕಾರ್ಯಕರ್ತೆಯರು ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಇತರೆ ಸ್ಕೀಂ ವರ್ಕರ್‌ಗಳ ಸೇವೆಯನ್ನು ಕಾಯಂಗೊಳಿಸಬೇಕು. ಅಲ್ಲಿಯವರೆಗೆ ಐಎಲ್‌ಸಿ ಶಿಫಾರಸ್ಸಿನಂತೆ ಸ್ಕೀಂ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ₹28 ಸಾವಿರ ಮಾಸಿಕ ವೇತನ ಜಾರಿಗೊಳಿಸಬೇಕು ಹಾಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಸ್ಟೀರಿಂಗ್ ಗ್ರೂಪ್ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೆಚ್ಚಿಸಬೇಕು. ಕಾರ್ಮಿಕರ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸಬೇಕು. ಯಾವುದೇ ರೂಪದ ಖಾಸಗೀಕರಣ ಮಾಡದೇ ಎನ್‌ಎಂಪಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಚೇತನಾ ಹಿರೇಮಠ, ಮುಮತಾಜ ಉಕ್ಕುಂದ, ಸುಧಾ ಕುಮ್ಮಣ್ಣವರ, ಲಕ್ಷ್ಮಿ ಜಲ್ಲಿ, ರತ್ನಾ ದೊಡ್ಡಮನಿ, ನೀಲಮ್ಮ ಭಜಂತ್ರಿ, ರೂಪಾ ಮಲ್ಲೂರ, ಸುಮಾ ಮಾಳಗಿ, ಲಕ್ಷ್ಮಿ ಹರಕುಣಿ, ಲೀಲಾ ಕಳ್ಳಿಮನಿ, ಬಸಮ್ಮ ಬಸ್ತಿ, ಪುಷ್ಪಾ ಕರದುಂಡಿ, ರಾಧಾ ಮಾಳದಕರ, ದ್ಯಾಮಕ್ಕ ದಾನಗೌಡ್ರ, ದ್ಯಾಮಕ್ಕ ಭಂಗಿ, ಪ್ರೇಮಾ ಕಟಗಿ, ಕವಿತಾ ಹೂಲಿಹಳ್ಳಿ, ಲಲಿತಾ ಪಿ.ಕೆ., ಇಂದ್ರವ್ವ ಎಸ್.ಕೆ., ನಿಂಗವ್ವ ಕನವಳ್ಳಿ, ಕಸ್ತೂರಿ ಭಜಂತ್ರಿ, ಶೋಭಾ ಹಾವೇರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಕಾರ್ಮಿಕ ಹಕ್ಕುಗಳಿಂದ ವಂಚಿತ: ಆರೋಪ

ಹಿರೇಕೆರೂರು: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟ ಯೋಜನೆಯ ಕಾರ್ಮಿಕರು ಕಳೆದ ಹಲವಾರು ದಶಕಗಳಿಂದ ಅತ್ಯಂತ ಕನಿಷ್ಠ ವೇತನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಕಾರ್ಯಕರ್ತೆಯರೆಂದು ಸೇವೆ ಪಡೆದುಕೊಳ್ಳುತ್ತಾ ಕಾರ್ಮಿಕರ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಆಶಾ ಕಾರ್ಯಕರ್ತೆಯರ ಇದ್ದರು.