ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಸುಮಾರು ೫ ದಿನಗಳಿಂದ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಸರಿಯಾಗಿ ನೀರು ಒದಗಿಸುವಂತೆ ಆಗ್ರಹಿಸಿ ಪಟ್ಟಣದ ವಾರ್ಡ್ ನಂ.೯ ಭೋವಿ ಗಲ್ಲಿ ನಿವಾಸಿಗಳು ಲೋಕಾಪುರ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಪಟ್ಟಣದ ವಾರ್ಡ್ ನಂ.೯ರ ಭೋವಿ ಗಲ್ಲಿಯಲ್ಲಿ ಬಹು ದಿನಗಳಿಂದ ಸರಿಯಾಗಿ ನೀರು ಪೂರೈಕೆ ಆಗದಿರುವ ಕುರಿತು, ಮೂರು ವಾರಗಳ ಹಿಂದೆ ಇಲ್ಲಿಯ ನಿವಾಸಿಗಳು ಪಪಂ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರ ಗಮನಕ್ಕೆ ತಂದಿದ್ದು, ಈ ಕುರಿತು ಪಪಂ ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವದಾಗಿ ಹೇಳಿ ಹೋಗಿದ್ದರು. ಹೇಳಿ ಹೋದ ನಂತರ ಇಲ್ಲಿಯವರೆಗೂ ನೀರು ಸರಿಯಾಗಿ ಸರಬರಾಜು ಆಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಾರ್ಡ್‌ನ ನಿವಾಸಿಗಳು ಪಪಂಗೆ ಮುತ್ತಿಗೆ ಹಾಕಿ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.ಸರಿಯಾಗಿ ನೀರು ಸರಬರಾಜು ಆಗದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ದು ಹಾಗೂ ಸಾರ್ವಜನಿಕರಿಂದ ಅರ್ಜಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ, ಆಗೊಮ್ಮೆ ಇಗೊಮ್ಮೆ ಬೀಡುವ ಕರೆಯ ಕಲುಷಿತ ನೀರು ಬಳಕೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ, ಆದಷ್ಟು ಬೇಗನೆ ಪ.ಪಂ ಅಧಿಕಾರಿಗಳು ಶುದ್ಧ ಕುಡಿಯುವ ನೀರು ಪೂರೈಸಬೇಕು ಹಾಗೂ ವಾಟರಮನ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ೧ ಗಂಟೆ ಕಾದರೂ ಅಧಿಕಾರಿಗಳ ಸುಳಿವಿಲ್ಲ: ಹಲವು ದಿನಗಳಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲವೆಂದು ನೀರಿನ ಸಮಸ್ಯೆ ಸರಿಡಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಇಂದು ಬೆಳಗ್ಗೆ ವಾರ್ಡ್ ನಿವಾಸಿಗಳು ಕಚೇರಿ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು. ಆದರೆ, ಮಧ್ಯಾಹ್ನ ೧ ಗಂಟೆಯಾದರೂ ಸಂಬಂಧಿಸಿದ ಅಧಿಕಾರಿಗಳು ಕಚೇರಿಗೆ ಆಗಮಿಸದ ಕಾರಣ ನಿವಾಸಿಗಳ ಆಕ್ರೋಶ ಮತ್ತಷ್ಟು ಹೆಚ್ಚಾಯಿತು. ಅಧಿಕಾರಿಗಳ ನಿರ್ಲಕ್ಷದಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.ಇಂಜಿನಿಯರ್ ಪ್ರಶಾಂತ ವಿರುದ್ಧ ಆಕ್ರೋಶ:
ಪಟ್ಟಣ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಪ್ರಶಾಂತ ಪಾಟೀಲ ಅವರು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೀರಿನ ಸಮಸ್ಯೆ ಬಗ್ಗೆ ಹಲವು ದಿನಗಳಿಂದ ಮೌಖಿಕವಾಗಿ ಹಾಗೂ ಲಿಖತವಾಗಿ ಇಂಜಿನಿಯರ್ ಗಮನಕ್ಕೆ ತಂದಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಈ ವಿಷಯ ಕುರಿತು ವಿಚಾರಿಸಿದರೇ ಸಾರ್ವಜನಿಕರಿಗೆ ಹಾರಿಕೆ ಉತ್ತರ ನೀಡುತ್ತಾರೆ, ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಫಂದಿಸುತಿಲ್ಲ, ೨ ಗಂಟೆ ಕಾದರೂ ಇಂಜಿನಿಯರ್ ಬಾರದ ಕಾರಣ ಮೇಲಾಧಿಕಾರಿಗಳು ಅವರ ವಿರುದ್ಧ ಸೂಕ್ತಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿದರು.ಮನವೊಲಿಸಿದ ಮುಖ್ಯಾಧಿಕಾರಿ:ವಾರ್ಡ್ ನಂ.೯ರ ಭೋವಿ ಗಲ್ಲಿಯ ನಿವಾಸಿಗಳಿಗೆ ಕುಡಿಯುವ ನೀರು ಸಮಸ್ಯೆ ಆದಷ್ಟು ಬೇಗ ಪರಿಹರಿಸಲಾಗುವುದು, ವಾಟರಮನ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಬೋರವೆಲ್ ಮೂಲಕ ನೀರು ಪೂರೈಕೆಗೆ ೨-೩ ದಿನ ಕಾಲಾವಕಾಶ ಬೇಕು ಅಲ್ಲಿಯವರೆಗೆ ಸಹಕರಿಸಿ ಎಂದು ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಪ್ರತಿಭಟನಾಕಾರರ ಮನವೊಲಿಸಿದರು. ಮುಖ್ಯಾಧಿಕಾರಿ ಮಾತಿಗೆ ಮನ್ನಣೆ ನೀಡಿದ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. ಆದಷ್ಟು ಬೇಗ ಕುಡಿವ ನೀರು ಪೂರೈಕೆ ಮಾಡದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ತಮ್ಮ ಪ್ರತಿಭಟನೆ ಹಿಂಪಡೆದರು. ಸಮಸ್ಯೆ ಆಲಿಸಿದ ಉಪವಿಭಾಗಾಧಿಕಾರಿ:
ಪಟ್ಟಣದ ವಾರ್ಡ್ ನಂ.೯ ಭೋವಿ ಗಲ್ಲಿ ನಿವಾಸಿಗಳು ಲೋಕಾಪುರ ಪಟ್ಟಣ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ತಿಳಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ಪಪಂಗೆ ಆಗಮಿಸಿ ಆ ವಾರ್ಡ್‌ನ ನಿವಾಸಿಗಳ ನೀರಿನ ಸಮಸ್ಯೆಯನ್ನು ಆಲಿಸಿ ಸ್ಥಳದಲ್ಲಿದ ತಹಸೀಲ್ದಾರ್ ಹಾಗೂ ಪಪಂ ಅಧಿಕಾರಿಗಳಿಗೆ ೨ ದಿನದಲ್ಲಿ ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಆದೇಶ ಮಾಡಿದರು ಹಾಗೂ ಕೆರೆಯಿಂದ ಆ ವಾರ್ಡ್‌ಗೆ ಸರಬರಾಜು ಆಗುವ ಮಾರ್ಗದಲ್ಲಿ ಅನಧಿಕೃತವಾಗಿ ಜೋಡನೆ ಮಾಡಿಕೊಂಡ ನಳಗಳನ್ನು ಕಟ್ಟ ಮಾಡಲು ಸೂಚಿಸಿದರು. ಈ ವೇಳೆ ವಾರ್ಡ್‌ನ ನಿವಾಸಿಗಳಾದ ಗುಲಾಬಸಾಬ್ ಅತ್ತಾರ, ಶೌಕತ್ತ ಕರ್ನಾಚಿ, ಸಾಧಿಕ ರಾಮದುರ್ಗ, ಹುಸೇನಬೇಗ ಜಮಾದಾರ, ಬಂದೆನಮಾಜ ತೋರಗಲ್ಲ, ಶಿವು ಭೋವಿ, ಇಮ್ರಾನ ರಾಮದುರ್ಗ, ಆನಂದ ನಾವಿ, ವಿಠ್ಠಲ ಕೌಜಲಗಿ, ಮೌಸೀನ್ ರಾಮದುರ್ಗ, ಅಸ್ಲಂ ಕರ್ನಾಚಿ, ರಾಜಾಹ್ಮದ್ ರಾಮದುರ್ಗ, ಅತಾಉಲ್ಲಾ ಅತ್ತಾರ, ಶಬ್ಬೀರ್ ತೋರಗಲ್ಲ ಹಾಗೂ ಪಟ್ಟಣದ ವಾರ್ಡ್ ನಂ.೯ ಭೋವಿ ಗಲ್ಲಿ ನಿವಾಸಿಗಳು, ಮಹಿಳೆಯರು ಇದ್ದರು.