ಬಡತನ ರೇಖೆಗಿಂತ ಕೆಳಮಟ್ಟದ ಕುಟುಂಬದ ಯಾವುದೇ ಸದಸ್ಯರು ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆ ನೆರೆವೇರಿಸಲು ನೀಡುತ್ತಿದ್ದ ಸಹಾಯಧನ ಮುಂದುವರಿಸಬೇಕು ಎಂದು ಆಗ್ರಹಿಸಿ ಶನಿವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಡತನ ರೇಖೆಗಿಂತ ಕೆಳಮಟ್ಟದ ಕುಟುಂಬದ ಯಾವುದೇ ಸದಸ್ಯರು ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆ ನೆರೆವೇರಿಸಲು ನೀಡುತ್ತಿದ್ದ ಸಹಾಯಧನ ಮುಂದುವರಿಸಬೇಕು ಎಂದು ಆಗ್ರಹಿಸಿ ಶನಿವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.

ಸರ್ಕಾರ ಈ ಹಿಂದೆ ಸದಸ್ಯರಿಗೆ 2008 ರಿಂದ 5000 ರು. ಸಹಾಯ ಧನ ನೀಡುವ ಅಂತ್ಯ ಸಂಸ್ಕಾರ ಯೋಜನೆಯನ್ನು ಹೊಂದಿತ್ತು. ಆದರೆ ರಾಜ್ಯ ಸರ್ಕಾರ 2021ರ ಸೆಪ್ಟೆಂಬರ್‌ನಿಂದ ರದ್ದುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ಇದನ್ನು ಮರು ಜಾರಿಗೊಳಿಸಿ, ಈ ಹಿಂದೆ ನೀಡುತ್ತಿದ್ದ 5000 ರು. ಸಹಾಯಧನದ ಬದಲು 10 ಸಾವಿರ ರು. ಸಹಾಯ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಅಂತ್ಯ ಸಂಸ್ಕಾರ ಯೋಜನೆ ಕೇವಲ ಕರ್ನಾಟಕ ಸರ್ಕಾರದಿಂದಲೇ 2006ರಿಂದ ಜಾರಿಗೊಳಿಸಲಾಗಿತ್ತು. ಈ ಜೀವಪರ ಹಾಗೂ ಜನಪರ ಅಂತ್ಯ ಸಂಸ್ಕಾರ ಯೋಜನೆಯನ್ನು ಅವೈಜ್ಞಾನಿಕವಾಗಿ ಹಾಗೂ ಮನುಷ್ಯ ವಿರೋಧಿಯಾಗಿ ರದ್ದುಗೊಳಿಸಿ ಬಡವರ ಸಾವಿನ ಜೊತೆ ಸರ್ಕಾರ ಹಾಗೂ ಅಧಿಕಾರಿಗಳು ದೌರ್ಜನ್ಯವೆಸಗಿದರು. ಬಿಪಿಎಲ್ ಕಾರ್ಡ್ ಹೊಂದಿರತಕ್ಕ ಬಡ ಕುಟುಂಬದ ಯಾವುದೇ ಧರ್ಮ ಅಥವಾ ಜಾತಿಗೆ ಸಂಬಂಧಪಟ್ಟ ವ್ಯಕ್ತಿ ಯಾವುದೇ ಕಾರಣದಿಂದ ಮೃತರಾದರೂ ರಾಜ್ಯ ಸರ್ಕಾರ ಅಂತ್ಯ ಸಂಸ್ಕಾರ ಯೋಜನೆಯಲ್ಲಿ 2006 ರಿಂದ 2021ರವರೆಗೆ 5 ಸಾವಿರ ರು. ಸಹಾಯ ಧನವನ್ನು ಮೃತರ ಅಂತ್ಯ ಕ್ರಿಯೆ ನಡೆಸುವ ವಾರಸುದಾರರಿಗೆ ನೀಡಿ ಹೃದಯವಂತಿಕೆಯನ್ನು ಮೆರೆಯಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರದ್ದುಗೊಳಿಸಿರುವ ಈ ಅಂತ್ಯ ಸಂಸ್ಕಾರ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಈ ಹಿಂದೆ ನೀಡುತ್ತಿದ್ದ 5 ಸಾವಿರ ರು. ಸಹಾಯ ಧನವನ್ನು 10 ಸಾವಿರ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಜನಮೇಜಿರಾವ್, ಎಚ್.ಎಂ.ಸಂಗಯ್ಯ, ಅರಸಾಳು ರಘುನಾಥ್, ಸಿ.ಶಂಕ್ರಪ್ಪ, ಲಿಂಗರಾಜು, ಶಿವಣ್ಣ ಎಸ್.ಪಿ., ಬಸವರಾಜ್, ಹಯಾತ್‌ಸಾಬ್, ವೇದಾಂತ್ ಗೌಡ, ಧರ್ಮರಾಜ್ ಮತ್ತಿತರರು ಇದ್ದರು.