ಏರಿಕೆಯಾದ ಬತ್ತದ ಬೀಜ ಧಾರಣೆ ಇಳಿಸಲು ಆಗ್ರಹ: ವಿ. ನಿಲೇಶ್‌

| Published : Jun 16 2024, 01:49 AM IST

ಏರಿಕೆಯಾದ ಬತ್ತದ ಬೀಜ ಧಾರಣೆ ಇಳಿಸಲು ಆಗ್ರಹ: ವಿ. ನಿಲೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಬತ್ತದ ಬೀಜದ ಧಾರಣೆ ಏರಿಕೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಸರ್ಕಾರ ಬತ್ತದ ಬೀಜದ ಧಾರಣೆ ಇ‍ಳಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್‌ ಸರ್ಕಾರವನ್ನು ಆಗ್ರಹಿಸಿದರು.

ಕೃಷಿ ಇಲಾಖೆ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬತ್ತದ ಬೀಜದ ಧಾರಣೆ ಏರಿಕೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಸರ್ಕಾರ ಬತ್ತದ ಬೀಜದ ಧಾರಣೆ ಇ‍ಳಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್‌ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ ಕೃಷಿ ಇಲಾಖೆ ಆವರಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೆಲವು ಅಧಿಕಾರಿಗಳು ಕೃಷಿಕ ಸಮಾಜದ ಸಭೆಗೆ ಆಗಮಿಸಿಲ್ಲ. 8 ದಿನದ ಮುಂಚೆಯೇ ನೊಟೀಸ್‌ ಕಳಿಸಲಾಗಿತ್ತು. ಆದರೂ ಬಂದಿಲ್ಲ. ಅವರಿಗೆ ಕಾರಣ ಕೇಳಿ ನೊಟೀಸ್‌ ನೀಡಬೇಕು ತಾಲೂಕು ಕೃಷಿಕ ಸಮಾಜದ ಸದಸ್ಯ ಕಾರ್ಯದರ್ಶಿ ಮಹೇಶ್ ಗೆ ಸೂಚಿಸಿದರು.

ತಾಲೂಕು ಕೃಷಿಕ ಸಮಾಜದ ಸಭೆಯ ನಡಾವಳಿಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಕಳಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಬೇಕು ಎಂದರು.

ಸಹಾಯಕ ತೋಟಗಾರಿಕೆ ನಿರ್ದೇಶಕ ರೋಹಿತ್‌ ಸಭೆಗೆ ಮಾಹಿತಿ ನೀಡಿ, ತೋಟಗಾರಿಕೆ ಇಲಾಖೆಯಿಂದ ಜೇನು ಪೆಟ್ಟಿಗೆ, ಜೇನು ಹುಳ ಹಾಗೂ ಸ್ಯಾಂಡ್ ಗೆ ಸಹಾಯ ಧನ ನೀಡುತ್ತೇವೆ. ಪ್ಯಾಕಿಂಗ್‌ ಹೌಸ್ ಗೆ ಸಹಾಯ ಧನವಿದೆ. 25ಲಕ್ಷ ರು. ವೆಚ್ಚದ ಅಡಕೆ ಸಂಸ್ಕೃರಣಾ ಘಟಕ ಮಾಡುವ ಅಡಕೆ ಬೆಳೆಗಾರರಿಗೆ 10 ಲಕ್ಷ ಸಾಲ ನೀಡುತ್ತೇವೆ. ಅಡಕೆ ಸುಲಿಯುವ ಮಿಷನ್, ಯಂತ್ರೋಪಕರಣಕ್ಕೆ ಸಹಾಯ ಧನ ನೀಡುತ್ತೇವೆ. ಹನಿ ನೀರಾವರಿಗೆ ಸಬ್ಸಿಡಿ ನೀಡುತ್ತೇವೆ ಎಂದರು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಈ ಹಿಂದೆ ತೋಟಗಾರಿಕೆ ಇಲಾಖೆ ಮೈಲು ತುತ್ತು ನೀಡಿತ್ತು. ಮತ್ತೆ ಮೈಲುತುತ್ತು ನೀಡಬೇಕು. ತೋಟಗಾರಿಕೆ ಇಲಾಖೆ ಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಗ್ರಾಮ ಸಭೆಯಲ್ಲಿ ತಿಳಿಸಬೇಕು ಎಂದರು.

ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಪಿ.ಕೆ.ಬಸವರಾಜಪ್ಪ ಮಾತನಾಡಿ, ತೋಟಗಾರಿಕೆ ಇಲಾಖೆ ಬೆಳೆಗಳಿಗೆ ಎಷ್ಟು ಪ್ರಮಾಣದ ಗೊಬ್ಬರ ನೀಡಬೇಕು ? ಎಂಬ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಕೆಲವು ಗೊಬ್ಬರದ ಮೂಟೆಗಳ ತೂಕದಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಮುತ್ತಿನಕೊಪ್ಪ ನರ್ಸರಿಯಿಂದ ಗಿಡ ನೀಡಿದರೆ ರೈತರಿಗೆ ಹೋಗಿ ಬರಲು ದೂರವಾಗುತ್ತದೆ. ಸಿಂಸೆಯಲ್ಲಿ ಗಿಡ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ರೈತ ಮಹಿಳೆ ವಾಣಿ ನರೇಂದ್ರ ಮಾತನಾಡಿ, ಯಂತ್ರಶ್ರೀ ಯೋಜನೆಯಡಿ ರೈತರಿಗೆ ಕೃಷಿ ಇಲಾಖೆ ಯಿಂದಲೇ ರಿಯಾಯ್ತಿ ದರದಲ್ಲಿ ಯಂತ್ರೋಪಕರಣ ನೀಡಿದರೆ ರೈತರಿಗೆ ಕೃಷಿ ಮಾಡಲು ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ರೈತರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಕಣಬೂರು ಮಂಜಮ್ಮ, ಜಿಲ್ಲಾ ಮಟ್ಟದ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬನ್ನೂರು ಸಣ್ಣೇಗೌಡ, ದ್ವಿತೀಯ ಸ್ಥಾನ ಪಡೆದ ಕೆ.ಎಸ್‌.ದಿವಾಕರ ಕರುಗುಂದ, ತೃತೀಯ ಸ್ಥಾನ ಪಡೆದ ಕೆ. ಕಣಬೂರು ಪೊಂಪಣ್ಣ, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಗಲಾಪುರ ಸತೀಶ್‌, ದ್ವಿತೀಯ ಸ್ಥಾನ ಪಡೆದ ಶಿರಗಳಲೆ ಪಿ.ವಿ.ಜಾರ್ಜ, ಮುತ್ತಿನಕೊಪ್ಪ ಸಿ.ಆರ್‌.ಕೃಷ್ಣಮೂರ್ತಿ, ತಾಲೂಕು ಮಟ್ಟದ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂಕ್ಸೆಯ ಲಲಿತ, ದ್ವಿತೀಯ ಸ್ಥಾನ ಪಡೆದ ಕಡಹಿನ ಬೈಲಿನ ಎಂ.ಟಿ.ಲಕ್ಷ್ಮೀದೇವಿ, ತೃತೀಯ ಸ್ಥಾನ ಪಡೆದ ಕಡಹಿನಬೈಲಿನ ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್ ವಹಿಸಿದ್ದರು. ಕೃಷಿಕ ಸಮಾಜ ಉಪಾಧ್ಯಕ್ಷ ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ, ನಿದೇಶಕರಾದ ಪಿ.ಕೆ. ಬಸವ ರಾಜಪ್ಪ, ಎಚ್‌.ಎನ್‌. ರವಿಶಂಕರ್, ವೈ.ಎಸ್‌.ಸುಬ್ರಮಣ್ಯ, ನಾಗರಾಜ ಶಟ್ಟಿ, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಇದ್ದರು.