ಸಾರಾಂಶ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಸರ್ಕಾರವು ಈಗ ಮುಂದಿಟ್ಟಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ನೀತಿಯನ್ನು ಪಂಜಾಬ್ ಮಾದರಿಯಲ್ಲಿ ತಿರಸ್ಕರಿಸುವ ತೀರ್ಮಾನ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟಾನಾಕಾರರು ಒನಕೆ ಓಬವ್ವ ವೃತ್ತದ ಬಳಿ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರವನ್ನು ಕೈಲಿಡಿದು ಘೋಷಣೆ ಕೂಗಿದರು.
ಕೇಂದ್ರದ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ನೀತಿ ಹಾಗೂ ಕಾರ್ಮಿಕ ವಿರೋಧಿ ನಾಲ್ಕು ಕೋಡ್ ಗಳನ್ನು ಜಾರಿಗೆ ತರುವ ಮೂಲಕ ದುಡಿವವರ್ಗದ ಮೇಲೆ ಗಧಾ ಪ್ರಹಾರ ನಡೆಸಿದಾಗ ದೇಶವ್ಯಾಪಿ ಪ್ರತಿಭಟನೆ ನಡೆದವು. ರೈತ ಸಂಘಟನೆಗಳು ದೆಹಲಿಗೆ ಮುತ್ತಿಗೆ ಹಾಕಿ 14 ತಿಂಗಳ ಕಾಲ ಐತಿಹಾಸಿಕ ಹೋರಾಟ ನಡೆಸಿದಾಗ. ಕೇಂದ್ರ ಸರ್ಕಾರ ಮಣಿದು ಮೂರು ಕಾಯ್ದೆಗಳನ್ನು ಹಿಂಪಡೆಯಿತು. ಆದರೆ ಹಿತ್ತಲ ಬಾಗಿಲಿನಿಂದ ಎಂಬಂತೆ ಕರ್ನಾಟಕದಲ್ಲಿ ಜಾರಿಮಾಡಿತು. ರೈತ, ಕಾರ್ಮಿಕ, ದಲಿತ, ಮಹಿಳಾ ಮುಂತಾದ ಜನವರ್ಗಗಳು ಬಿಜೆಪಿಗೆ ತಕ್ಕಪಾಠ ಕಲಿಸುವ ತೀರ್ಮಾನ ತೆಗೆದುಕೊಂಡೆವು. ಅದರಿಂದಾಗಿಯೇ 2023ರಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ತಂದಿದ್ದ ಜನ ವಿರೋಧಿ ನೀತಿಗಳನ್ನು ಹಿಂತೆಗೆದುಕೊಳ್ಳುವ ಮತ್ತು ಜನ ಚಳವಳಿಗಳು ಮುಂದಿಟ್ಟಿದ್ದ ಹಕ್ಕೊತ್ತಾಯಗಳನ್ನು ಮಾನ್ಯ ಮಾಡುವ ಮಾತು ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅದು ತನ್ನ ಮಾತನ್ನು ಮರೆತಿದೆ. ಹಲವು ಬಾರಿ ನೆನಪಿಸುವ, ಒತ್ತಾಯಿಸುವ ಪ್ರಯತ್ನ ಮಾಡಿದರೂ ಫಲ ನೀಡಿಲ್ಲವೆಂದು ಪ್ರತಿಭಟಾಕಾರರು ಆರೋಪಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ತಂದಿದ್ದ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಅಕ್ರಮ ರೀತಿಯಲ್ಲಿ ಬೆಳಗಾವಿಯಲ್ಲಿ ತೆರೆದಿರುವ ಮೊದಲ ಖಾಸಗೀ ತರಕಾರಿ ಮಾರುಕಟ್ಟೆಯನ್ನು ಕೂಡಲೇ ಬಂದ್ ಮಾಡಿಸಿ ಎಪಿಎಂಸಿ ಕಟ್ಟಡದಲ್ಲೇ ಮಾರುಕಟ್ಟೆಗೆ ಪುನರ್ ಚಾಲನೆ ನೀಡಬೇಕು. ಕೃಷಿ ವಿದ್ಯುತ್ ಮೀಟರ್‌ಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕೈಬಿಡಬೇಕು.ಕೃಷಿಗೆ ವಿದ್ಯುತ್ ಸಂಪರ್ಕ ಪಡೆಯಲು ಘೋಷಿಸಲಾಗಿರುವ ಸ್ವಯಂ ವೆಚ್ಚ ಯೋಜನೆಯನ್ನು ರದ್ದುಪಡಿಸಬೇಕು. ವಿದ್ಯುತ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಖಾಸಗೀಕರಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಗರ್ ಹುಕುಂ ಮತ್ತು ಅರಣ್ಯ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡಬಾರದು ಮತ್ತು ಒಕ್ಕಲೆಬ್ಬಿಸಬಾರದು. ಪಹಣಿ, ಖಾತೆ ಪಡೆದು ಅನೇಕ ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಭೂಮಿಗಳ ಅರಣ್ಯಇಂಡೀಕರಣ ರದ್ದುಪಡಿಸಬೇಕು. ಯಾವುದೇ ಕಾರಣಕ್ಕೂ ಮತ್ತೆ ದಾಖಲೆ ರದ್ದು ಪಡಿಸಬಾರದು. ಬಗರ್ ಹುಕುಂ ರೈತರ ಬಹು ದಶಕಗಳ ಕಾಯುವಿಕೆಯನ್ನುಅಂತ್ಯಗೊಳಿಸಿ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಕಾನೂನು ತೊಡಕನ್ನು ನಿವಾರಿಸಿ ಉಳುಮೆ ಮಾಡುತ್ತಿರುವ ಎಲ್ಲಾ ಸಣ್ಣ ರೈತರಿಗೂ ಭೂಮಿ ದಕ್ಕುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕುಮಾರ ಸಮತಳ, ಕೆ.ಪಿ.ಭೂತಯ್ಯ, ಸತ್ಯಪ್ಪ ಮಲ್ಲಾಪುರ, ಟಿ.ಷಫಿವುಲ್ಲಾ, ಕೆ.ಸಿ.ಹೊರಕೇರಪ್ಪ, ಈಚಗಟ್ಟದ ಸಿದ್ದವೀರಪ್ಪ, ಹನುಮಂತಪ್ಪ, ಹಂಪಯ್ಯನಮಾಳಿಗೆ ಧನಂಜಯ, ಕೆ.ಬಿ.ನಾಗರಾಜ್, ಕೆ.ಟಿ.ತಿಪ್ಪೇಸ್ವಾಮಿ, ದೊಡ್ಡ ಸಿದ್ದವ್ವನಹಳ್ಳಿ ಮಲ್ಲಿಕಾರ್ಜುನ, ಕಬ್ಬಿಗೆರೆ ನಾಗರಾಜ್, ರೊಕ್ಕದ ನಿಜಲಿಂಗಪ್ಪ, ಹುಣಿಸೆಕಟ್ಟೆ ಕಾಂತರಾಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಭಟನೆ । ಜಿಲ್ಲಾಧಿಕಾರಿಗೆ ಮನವಿ