ಸಾರಾಂಶ
ಹಾವೇರಿ: ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರ ಹಣಕ್ಕೆ ಸಮನಾಗಿ ಎಸ್‌ಡಿಆರ್‌ಎಫ್ ನಿಯಮದಂತೆ ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣ ಸೇರಿಸಿ ರೈತರಿಗೆ ಬರ ಪರಿಹಾರ ಹಣ ಜಮೆ ಮಾಡಬೇಕು. ಈ ಹಿಂದೆ ನೀಡಿದ್ದ ₹2 ಸಾವಿರ ಹಣವನ್ನು ಕಡಿತಗೊಳಿಸದೆ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಹಾಗೂ ಪ್ರಸ್ತುತ ವರ್ಷ ಅನಾವೃಷ್ಟಿಯಿಂದಾಗಿ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲದ ಸೂಲಕ್ಕೆ ಸಿಲುಕಿ ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಕೃಷಿ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ಹಾವೇರಿ ಜಿಲ್ಲೆಯಲ್ಲಿ ನಡೆದಿವೆ. ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸುಮಾರು ತಿಂಗಳು ಗತಿಸಿದರೂ ನಮ್ಮನ್ನು ಆಳುತ್ತಿರುವ ಸರ್ಕಾರಗಳು ಬರಗಾಲದ ಕಡೆ ಗಮನ ಹರಿಸದೆ ಚುನಾವಣೆ ಗುಂಗಿನಲ್ಲಿ ಕಳೆದು ಹೋಗಿವೆ. ಇತ್ತೀಚೆಗೆ ರಾಜ್ಯ ಸರ್ಕಾರ ಕಾಟಾಚಾರಕ್ಕೆ ₹2 ಸಾವಿರ ಪರಿಹಾರವನ್ನು ಕೆಲವೇ ರೈತರ ಖಾತೆಗೆ ಹಾಕಿ ಕೇಂದ್ರದ ಕಡೆ ಬೆರಳು ತೋರಿಸಿತ್ತು. ಈಗ ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹8500ಗಳಂತೆ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ₹2 ಸಾವಿರ ಕಡಿತಗೊಳಿಸಿ ಪ್ರತಿ ಹೆಕ್ಟೇರಿಗೆ ₹6500 ಜಮೆ ಮಾಡಲಾಗುತ್ತಿದೆ. ಬರಗಾಲದ ಸನ್ನಿವೇಶದಲ್ಲಿ ಕೃಷಿ ಮಾಡುವುದು ದುಸ್ತರವಾಗಿದೆ. ಕಾರಣ ಎಸ್‌ಡಿಆರ್‌ಫ್ ನಿಧಿಯಿಂದ ₹8500 ಅನ್ನು ಪ್ರತಿ ಹೆಕ್ಟೇರ್‌ಗೆ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಯಾವೊಬ್ಬ ರೈತ ಬರ ಪರಿಹಾರಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಜಿಲ್ಲೆಯ ರೈತರು ಒಂದೇ ದಿನದಲ್ಲಿ ಬರ ಪರಿಹಾರಕ್ಕಾಗಿ ₹18 ಸಾವಿರ ಅರ್ಜಿಗಳನ್ನು ಸಲ್ಲಿಸಿದ್ದೇವೆ. ವಸ್ತುಸ್ಥಿತಿ ಹೀಗಿರುವಾಗ ರೈತರ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಸಂಘಟನೆ ಖಂಡಿಸುತ್ತದೆ. ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬರ ಪರಿಹಾರ ಕೆಲವೇ ಕೆಲವು ರೈತರಿಗೆ ತಲುಪಿದೆ. ಬರ ಪರಿಹಾರ ಸಂಪೂರ್ಣ ರೈತರ ಖಾತೆಗೆ ಜಮಾ ಮಾಡುವುದರ ಜೊತೆಗೆ ರಾಜ್ಯ ಸರ್ಕಾರದ ಪಾಲು ಏನು ಎಂಬುದನ್ನು ಘೋಷಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಎಸ್‌ಡಿಆರ್‌ಎಫ್ ನಿಯಮದಡಿ ಕೇಂದ್ರದ ಪಾಲಿನ ಜೊತೆಗೆ ರಾಜ್ಯದಿಂದಲೂ ಪ್ರತಿ ಹೆಕ್ಟೇರ್‌ಗೆ ₹8500 ಬಿಡುಗಡೆ ಮಾಡಬೇಕು. ಎರಡನ್ನೂ ಸೇರಿಸಿ ರೈತರ ಖಾತೆಗೆ ಕೂಡಲೇ ಜಮೆ ಮಾಡಬೇಕು. ವಿಳಂಬವಾದರೆ ಪ್ರತಿ ತಾಲೂಕು ಕಚೇರಿಗೆ ಬೀಗ ಹಾಕಿ ನಿರಂತರ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗುಣಮಟ್ಟದ ಗೊಬ್ಬರ, ಬೀಜ, ಕ್ರಿಮಿನಾಶಕ ಔಷಧಿಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು. ಕಳಪೆ ಗುಣಮಟ್ಟದ ಬೀಜ, ಗೊಬ್ಬರ, ವಿತರಣೆ ಮಾಡುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳಪೆ ಗುಣಮಟ್ಟದ ಬೀಜ, ಗೊಬ್ಬರ, ವಿತರಣೆ ಮಾಡುವ ಅಂಗಡಿಗಳ ಲೈಸೆನ್ಸ್ ರದ್ದು ಮಾಡಬೇಕು. ತಾಲೂಕಿನ ಸೊಸೈಟಿ ಮತ್ತು ರೈತ ಉತ್ಪಾದಕರ ಕಂಪನಿಗಳಲ್ಲಿ ಗೊಬ್ಬರ ಶೇಖರಣೆ ಮಾಡಬೇಕು. ಗೊಬ್ಬರಕ್ಕೆ ಯಾವುದೇ ಲಿಂಕ್ ಕೊಡದಂತೆ ಕ್ರಮ ಕೈಗೊಳ್ಳಬೇಕು. ಬ್ಯಾಂಕಿನವರು ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಬಾರದು. ಹಾವೇರಿ ಜಿಲ್ಲಾ ಹಾಲು ಒಕ್ಕೂಟಕ್ಕೆ ನೂರಾರು ಕೋಟಿ ಹಣ ಮಂಜೂರು ಆದರೂ ಮೇಗಾ ಡೈರಿ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ತ್ವರಿತವಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಸುರೇಶ್ ಚಲವಾದಿ, ಶಿವಬಸಪ್ಪ ಗೋವಿ, ಮಂಜುನಾಥ ಕದಂ, ರಾಜು ತರ್ಲಗಟ್ಟ, ಹೇಮಣ್ಣ ಬೂದಗಟ್ಟಿ, ಈರಣ್ಣ ಚಕ್ರಸಾಲಿ ಕರಬಸಪ್ಪ ನಾಗಮ್ಮನವರ, ಮುತ್ತಯ್ಯ ಚಿನ್ನಿಕಟ್ಟಿ, ಮಾಲತೇಶ ಕಂಬಳಿ, ಕೋಟೆಪ್ಪ ಅಳಲಗೆರಿ, ಮಂಜಪ್ಪ ಪೂಜಾರ, ಶಿವಪ್ಪ ಕೋಡಿಹಳ್ಳಿ ಇತರರು ಇದ್ದರು.