ಕಾರಟಗಿ: ತುಂಗಭದ್ರ ಎಡದಂಡೆ ನಾಲೆಯನ್ನು ಶೀಘ್ರ ದುರಸ್ತಿ ಪೂರ್ಣಗೊಳಿಸಿ ಮುಂಗಾರು ಹಂಗಾಮಿಗೆ ತಕ್ಷಣ ನೀರು ಹರಿಸಬೇಕು ಮತ್ತು ಮುಂದಿನ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಮುನಿರಾಬಾದಿನಲ್ಲಿ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಹಾಗೂ ಕೆ.ಆರ್.ಎಸ್ ಸಂಘಟನೆ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಕನಕದಾಸ ವೃತ್ತದ ಬಳಿ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ಪ್ರತಿಭಟಿಸಿದ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ನೇತೃತ್ವದಲ್ಲಿ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಶರಣಪ್ಪ ದೊಡ್ಡಮನಿ ಮಾತನಾಡಿ, ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಈಗಾಗಲೇ ಜಲಾಶಯಕ್ಕೆ 60ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹಗೊಂಡಿದ್ದರು ಸಂಬಂಧಿಸಿದ ಅಧಿಕಾರಿಗಳು ಇನ್ನೂ ಕಾಲುವೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ. ಈಗ ಎಡದಂಡೆ ನಾಲೆ ದುರಸ್ತಿ ನೆಪವೊಡ್ಡಿ ನೀರು ಹರಿಸುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದು ಸಲ್ಲದ ವಿಚಾರ. ಕೂಡಲೇ ಕಾಲುವೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಮುಂಗಾರು ಹಂಗಾಮಿಗೆ ಭತ್ತದ ಸಸಿ ಸಿದ್ಧಪಡಿಸಿಟ್ಟುಕೊಂಡು ಭತ್ತ ಬಿತ್ತನೆಗೆ ಕಾಯುತ್ತಿರುವ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಸಮ್ಮುಖದಲ್ಲಿ ಮುನಿರಾಬಾದ ಕೇಂದ್ರ ಕಚೇರಿಯಲ್ಲಿಯೇ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಮನವಿ ಕಂದಾಯ ಅಧಿಕಾರಿ ಸಂಗಮ್ಮ ಹಿರೇಮಠ ಹಾಗೂ ನೀರಾವರಿ ಇಲಾಖೆಯ ಎಇ ಪಲ್ಲವಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಂಪಣ್ಣ ನಾಯಕ, ಕನಕಪ್ಪ ಉಡುಮಕಲ್, ಗಂಗಪ್ಪಯಾದವ್, ಸಂತೋಷ ಕನ್ನಾಳ, ಶ್ಯಾಮಿದ್ ಅಲಿ ಹುಲಿಹೈದರ್, ಮೈನುದ್ದೀನ್, ಗಣೇಶ್ ಶಿಂದೆ ಮಹಿಬೂಬ್, ನಾಗಪ್ಪ ಕಂಬಳಿ, ದುರುಗಪ್ಪ, ಕನಕಪ್ಪ ಹುಡೇಜಾಲಿ ರಾಜ್ಯ ರೈತ ಘಟಕದ ಕಾರ್ಯದರ್ಶಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿ ಸರ್ಕಾರ ರೈತರ ಬೇಡಿಕೆ ತಕ್ಷಣ ಈಡೇರಿಸಬೇಕೆಂದು ಒತ್ತಾಯಿಸಿದರು.