ಗುತ್ತಿಬಸವಣ್ಣ ಉಪ ಕಾಲುವೆಗೆ ನೀರು ಹರಿಸಲು ಆಗ್ರಹ

| Published : Mar 26 2025, 01:34 AM IST

ಸಾರಾಂಶ

ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿಯೇ ನೀರಿನ ಸಮಸ್ಯೆ ಇದ್ದರೂ ನೆರೆಯ ತೆಲಂಗಾಣಕ್ಕೆ ಆಲಮಟ್ಟಿ ನೀರು ಹರಿಸಿದ್ದಾರೆ. ಇದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಅಂಜುಟಗಿ, ಬೂದಿಹಾಳ, ಭತಗುಣಕಿ, ಅಹಿರಸಂಗ, ಝಳಕಿ, ಇಂಡಿ ರೈಲು ನಿಲ್ದಾಣ ಗ್ರಾಮಗಳ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಗುತ್ತಿ ಬಸವಣ್ಣ ಏತ ನೀರಾವರಿ ಸಬ್ ಕಾಲುವೆಗಳಿಗೆ ತುರ್ತು ಜನ, ಜಾನುವಾರಗಳಿಗೆ ಕುಡಿಯಲು ನೀರು ಅವಶ್ಯಕತೆ ಇದ್ದು, ಕೂಡಲೇ ಉಪ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಜೆಡಿಎಸ್, ಬಿಜೆಪಿ ಮುಖಂಡರ ನೇತೃತ್ವದಲ್ಲಿ ರೈತರ ಬೃಹತ್ ಪಾದಯಾತ್ರೆ ನಡೆಯಿತು.

ಪಾದಯಾತ್ರೆಯು ಇಂಡಿ ರೈಲು ನಿಲ್ದಾಣ ರಸ್ತೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಿಂದ ಹೊರಟು ಶಿವಾಜಿ ಸರ್ಕಲ್, ಮಹಾವೀರ, ಅಂಬೇಡ್ಕರ್, ಬಸವೇಶ್ವರ ವೃತ್ತದ ಮೂಲಕ ನಡೆದು ಮಿನಿ ವಿಧಾನಸೌದ ತಲುಪಿತು. ಪಾದಯಾತ್ರೆ ಉದ್ದೇಶಿಸಿ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಭೈರುಣಗಿ, ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ, ಬಿಜೆಪಿಯ ಹಣಮಂತ್ರಾಯಗೌಡ ಪಾಟೀಲ ಅಂಜುಟಗಿ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿಯೇ ನೀರಿನ ಸಮಸ್ಯೆ ಇದ್ದರೂ ನೆರೆಯ ತೆಲಂಗಾಣಕ್ಕೆ ಆಲಮಟ್ಟಿ ನೀರು ಹರಿಸಿದ್ದಾರೆ. ಇದು ಜಿಲ್ಲೆಯ ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಪ್ರತಿ ವರ್ಷ ಬೆಸಿಗೆ ಬಂದರೆ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸುಮಾರು 9 ವರ್ಷಗಳ ಹಿಂದೆ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆ ವಸಂತ ನಗರ, ಹಂಜಗಿ ಗ್ರಾಮದಿಂದ ಝಳಕಿ ಗ್ರಾಮದ ವ್ಯಾಪ್ತಿ ವರೆಗೆ ಸಬ್ ಕಾಲುವೆ ಹಾಯಿದು ಹೋಗಿದ್ದು, ಇಲ್ಲಿಯವರೆಗೆ ಮೇಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ಹನಿ ನೀರು ಬಂದಿರುವುದಿಲ್ಲ. ಸುಮಾರು 9 ವರ್ಷ ಕಳೆದರು ಕಾಲುವೆಗೆ ನೀರು ಹರಿಯದೇ ಇರುವುದು ನಮ್ಮ ಭಾಗದ ರೈತರು, ಸಾರ್ವಜನಿಕರ ದುರದೃಷ್ಟಕರ ಸಂಗತಿ. ಇಲ್ಲಿಯವರೆಗೆ ನ್ಯಾಯ ಸಿಕ್ಕಿಲ್ಲ. ಈ ಗ್ರಾಮಗಳ ವ್ಯಾಪ್ತಿಗೆ ಬರುವ ಎಲ್ಲಾ ಬಾವಿ, ಬೋರವೆಲ್‌ಗಳು ಬತ್ತಿಹೋಗಿವೆ. ನೀರಿನ ಯಾವುದೇ ಮೂಲ ಸೌಕರ್ಯ ಇರುವುದಿಲ್ಲ. ಈ ಭಾಗದ ರೈತರ ಬದಕು, ತುಂಬ ಕಷ್ಟಕರವಾಗಿದೆ. ರೈತರು ಹಲವು ಬಾರಿ ಮನವಿ ಮಾಡಿದರು ಕೂಡಾ ಯಾವುದೇ ಪ್ರಯೋಜನ ಆಗಿರುವದಿಲ್ಲ. ಕೂಡಲೆ ಈ ಭಾಗದ ರೈತರ ನೋವನ್ನು ಆಲಸಿ, ಸರ್ಕಾರ ಈ ಭಾಗದ ರೈತರ ಧ್ವನಿಗೆ ಸ್ಪಂದಿಸಿ ಕಾಲುವೆಗೆ ನೀರು ಹರಿಸುಬೇಕು ಎಂದು ಒತ್ತಾಯಿಸಿದರು.

ನಂತರ ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ, ಕೆಬಿಜೆಎನ್‌ಎಲ್‌ ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿಗೆ ಮನವಿ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಹಣಮಂತ್ರಾಯಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಮರೇಪ್ಪ ಗಿರಣಿವಡ್ಡರ ಸೇರಿದಂತೆ ಅಂಜುಟಗಿ, ಬೂದಿಹಾಳ, ಭತಗುಣಕಿ, ಅಹಿರಸಂಗ, ಝಳಕಿ, ಇಂಡಿ ರೈಲು ನಿಲ್ದಾಣ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.