ಸಾರಾಂಶ
ಹೊಸ ಕಟ್ಟಡ, ಸೇತುವೆ, ಸುರಂಗ ಹೀಗೆ ಎಲ್ಲದಕ್ಕೂ ಪಿಟ್ ನೆಸ್ ಸರ್ಟಿಫಿಕೆಟ್ ಇದೆಯೇ ಎಂದು ಕೇಳುವವರು ಈ ಕಟ್ಟಡಗಳಿಗೆ ಪಿಟ್ ನೆಸ್ ಸರ್ಟಿಫಿಕೆಟ್ ಪಡೆದಿದ್ದಾರಾ
ಕಾರವಾರ: ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾ ನೋಂದಣಾಧಿಕಾರಿ ಏಕಚೇರಿ ಹಾಗೂ ಕಾರವಾರ ತಹಸೀಲ್ದಾರ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.
ಈ ಎರಡೂ ಕಟ್ಟಡಗಳು ಅತ್ಯಂತ ದುರ್ಬಲವಾಗಿದೆ. ಭಾರಿ ಗಾಳಿ ಮಳೆಗೆ ಕುಸಿದು ದುರಂತವಾದರೆ ಜನರ ಜೀವಕ್ಕೆ ಯಾರು ಹೊಣೆ ? ದುರಂತ ಉಂಟಾಗುವುದಕ್ಕಿಂತ ಮುನ್ನವೇ ಎಚ್ಚೆತ್ತುಕೊಳ್ಳಬೇಕಾಗಿದೆ. ಜತೆಗೆ ವಿಶೇಷಚೇತನರು, ಹಿರಿಯ ನಾಗರಿಕರು, ವೃದ್ಧರಿಗೆ ತಹಸೀಲ್ದಾರ ಕಚೇರಿ ಹಾಗೂ ನೋಂದಣಿ ಇಲಾಖೆ ಕಚೇರಿಗೆ ಮೆಟ್ಟಿಲೇರಿ ಹೋಗುವುದೇ ಒಂದು ಶಿಕ್ಷೆಯಾಗಿ ಪರಿಣಮಿಸಿದೆ.ನಗರದಲ್ಲಿರುವ ಮರದ ಅಪಾಯಕಾರಿ ಟೊಂಗೆ ಕಡಿಯಲು ಅಮಾಯಕ ಮಹಿಳೆ ಬಲಿಯಾಗಬೇಕಾಯಿತು. ಈಗ ಈ ಕಚೇರಿಗಳ ಸ್ಥಳಾಂತರಕ್ಕೆ ದುರಂತವೇ ಆಗಬೇಕಾ. ಅದಕ್ಕಿಂತ ಮುನ್ನವೇ ಎಚ್ಚೆತ್ತುಕೊಂಡು ಸ್ಥಳಾಂತರ ಮಾಡಲು ಇರುವ ಅಡ್ಡಿಯಾದರೂ ಏನು.
ಹೊಸ ಕಟ್ಟಡ, ಸೇತುವೆ, ಸುರಂಗ ಹೀಗೆ ಎಲ್ಲದಕ್ಕೂ ಪಿಟ್ ನೆಸ್ ಸರ್ಟಿಫಿಕೆಟ್ ಇದೆಯೇ ಎಂದು ಕೇಳುವವರು ಈ ಕಟ್ಟಡಗಳಿಗೆ ಪಿಟ್ ನೆಸ್ ಸರ್ಟಿಫಿಕೆಟ್ ಪಡೆದಿದ್ದಾರಾ? ಕಟ್ಟಡ ಸುರಕ್ಷಿತವಾಗಿದೆಯೇ, ಜನರ ಜೀವಕ್ಕೆ ಗ್ಯಾರಂಟಿ ಕೊಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಬೇಕಾಗಿದೆ.ನೋಂದಣಿ ಇಲಾಖೆ ಎದುರೇ ಹೊಸ ಡಿಸಿ ಕಾಂಪ್ಲೆಕ್ಸ್ ಪ್ರಜಾಸೌಧ ನಿರ್ಮಾಣವಾಗಿದೆ. ಈಗಿರುವ ಡಿಸಿ ಕಚೇರಿ ಬಳಿಯೇ ಕರೂರು ಮೈದಾನದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಈ ಎರಡಕ್ಕೂ ನಾನು ಶಾಸಕಳಾಗಿ ಇರುವಾಗಲೆ ಹಣ ಬಿಡುಗಡೆಯಾಗಿತ್ತು.
ನಮ್ಮ ಹಿರಿಯ ನಾಗರಿಕರ ಸುರಕ್ಷತೆ, ವಿಶೇಷ ಚೇತನರ ಅನುಕೂಲಕ್ಕಾಗಿ ಈ ಎರಡೂ ಇಲಾಖೆಗಳನ್ನು ಹೊಸ ಕಟ್ಟಡಗಳಿಗೆ ಶೀಘ್ರದಲ್ಲಿ ಸ್ಥಳಾಂತರಿಸಬೇಕು ಹಾಗೂ ಜಿಲ್ಲೆಯ ಎಲ್ಲೆಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ದುರ್ಬಲವಾಗಿದ್ದಲ್ಲಿ ಅಥವಾ ವೃದ್ಧರು, ವಿಶೇಷ ಚೇತನರಿಗೆ ಹೋಗಿ ಬರಲು ಸಮಸ್ಯೆ ಇದ್ದಲ್ಲಿ ನೆಲ ಮಹಡಿಗೆ ಕಚೇರಿ ಸ್ಥಳಾಂತರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಅವರನ್ನು ರೂಪಾಲಿ ಎಸ್ ನಾಯ್ಕ ಆಗ್ರಹಿಸಿದ್ದಾರೆ.ಒಂದು ವೇಳೆ ಈ ಹಳೆಯ ಕಟ್ಟಡಗಳಿಗೆ ಹಾನಿ ಆಗಿ ವೃದ್ಧರು,ವಿಶೇಷ ಚೇತನರು, ಸಾರ್ವಜನಿಕರಿಗೆ ಆಗುವ ಸಮಸ್ಯೆಯ ಹೊಣೆ ಅಧಿಕಾರಿಗಳು ಹಾಗೂ ಈ ಕ್ಷೇತ್ರದ ಜನಪ್ರತಿನಿಧಿ ಹೊರಬೇಕೆಂದು ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿಗಳು ನೋಂದಣಾಧಿಕಾರಿ ಕಚೇರಿ ಹಾಗೂ ತಹಸೀಲ್ದಾರ ಕಚೇರಿಗೆ ಒಮ್ಮೆ ಭೇಟಿ ನೀಡಿ ಪರಿಶೀಲಿಸಿದರೆ ವಾಸ್ತವಿಕ ಸ್ಥಿತಿಗತಿ ತಿಳಿದುಬರಲಿದೆ. ವಿಶೇಷ ಚೇತನರು, ವೃದ್ಧರು ಕಚೇರಿಯ ಮೆಟ್ಟಿಲೇರಲು ಪರದಾಡಬೇಕಾದ ಪರಿಸ್ಥಿತಿ ಇದ್ದು, ಜಿಲ್ಲಾಧಿಕಾರಿಗಳು ಒಮ್ಮೆ ಪರಿಶೀಲಿಸಬೇಕೆಂದು ರೂಪಾಲಿ ಎಸ್. ನಾಯ್ಕ ಆಗ್ರಹಿಸಿದ್ದಾರೆ.