ಸಾರಾಂಶ
ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನದಲ್ಲಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿದೆ.
ರಸ್ತೆ ನಡು ಮಧ್ಯೆದಲ್ಲಿಯೂ ಬ್ಯಾರಿಕೇಡ್ ಹಾಕಿದ್ದರಿಂದ ರೈತರಿಗೆ ತೊಂದರೆಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅನುದಾನದಲ್ಲಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿದೆ. ಆದರೀಗ ಆ ಬ್ಯಾರಿಕೇಡ್‌ನಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಕೂಡಲೇ ತೆರವು ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮೈಲಾರಲಿಂಗೇಶ್ವರ ಮಹಾದ್ವಾರದಿಂದ ದೇವಸ್ಥಾನದವರೆಗೂ, ನಡು ರಸ್ತೆ ಸೇರಿ 140 ಮೀಟರ್ ಮೀಟರ್ ಉದ್ದ 3 ಸಾಲು ಸೇರಿ ಒಟ್ಟು 420 ಮೀಟರ್ ಉದ್ದದ ಕಬ್ಬಿಣದ ಬ್ಯಾರಿಕೇಡ್ ಹಾಕಲಾಗಿದೆ. ಪ್ರತಿ ವರ್ಷ ಜಾತ್ರೆಯಲ್ಲಿ ಬೊಂಬುಗಳ ಬ್ಯಾರಿಕೇಡ್ ಹಾಕಿ ಭಕ್ತರನ್ನು ನಿಯಂತ್ರಿಸಲು ಅಳವಡಿಸಿದ್ದರು. ಈ ಬಾರಿಯೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಬಾರಿ ಶಾಶ್ವತ ಕಬ್ಬಿಣದ ಬ್ಯಾರಿಕೇಡ್ ಹಾಕಿದ್ದಾರೆ.ಕಾಮಗಾರಿ ಆದೇಶವೇ ಇಲ್ಲ:
ಮೈಲಾರಲಿಂಗೇಶ್ವರ ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಎ ಗ್ರೇಡ್ ದೇವಸ್ಥಾನವಾಗಿದ್ದು, ಭಕ್ತರಿಂದ ಜಾತ್ರೆ ಇತರೆ ದಿನಗಳಲ್ಲಿ ಸಾಕಷ್ಟು ದೇಣಿಗೆ ಸಂಗ್ರಹವಾಗುತ್ತಿದೆ. ಈ ದೇವಸ್ಥಾನದ ₹40.88 ಲಕ್ಷ ಅನುದಾನವನ್ನು ಕಬ್ಬಿಣದ ಬ್ಯಾರಿಕೇಡ್ ಕಾಮಗಾರಿಗೆ ಬಳಕೆ ಮಾಡಿದ್ದಾರೆ. ಕಾಮಗಾರಿಯನ್ನು ನಿರ್ಮಿತಿ ಕೇಂದ್ರದ ಎಂಜಿನಿಯರ್ ಮಾಡಿದ್ದಾರೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ಮಿತಿ ಕೇಂದ್ರದ ಎಂಜಿನಿಯರ್ ಇಬ್ಬರೂ, ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಸ್ಪಷ್ಟನೆಗಾಗಿ ಕನ್ನಡಪ್ರಭದಿಂದ ದೂರವಾಣಿ ಕರೆ ಮಾಡಿದರೂ ಕರೆ ಕಡಿತಗೊಳಿಸುತ್ತಿದ್ದಾರೆ.ಡಿಸಿ ಮೌಖಿಕ ಆದೇಶ.!
ನಿಯಮಗಳ ಪ್ರಕಾರ ನಿರ್ಧಿಷ್ಟವಾದ ಕಾಮಗಾರಿ ಕುರಿತು ಜಿಲ್ಲಾಡಳಿತದಿಂದ ಸ್ಪಷ್ಟ ಆದೇಶ ಹೊರಡಿಸಬೇಕಿದೆ. ಆದರೆ ಕೇವಲ ಮೌಖಿಕ ಆದೇಶದ ಮೇರಿಗೆ ಮೈಲಾರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆಯ ಅನುದಾನದಡಿಯಲ್ಲಿ ಜಾತ್ರೆಯಲ್ಲಿ ಭಕ್ತರನ್ನು ನಿಯಂತ್ರಿಸಲು ಕಬ್ಬಿಣದ ಬ್ಯಾರಿಕೇಡ್ ಕಾಮಗಾರಿಯನ್ನು ಮಾಡಲು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಡಳಿತ ವಹಿಸಿದೆ. ಈ ಕುರಿತು ಯಾವ ಅಧಿಕಾರಿಗಳು ಜಿಲ್ಲಾಡಳಿತದ ಪ್ರತಿ ನೀಡದೇ ಜಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.ರೈತರಿಗೆ ಬ್ಯಾರಿಕೇಡ್ ಅಡ್ಡಿ?
ಮೈಲಾರದ ರೈತರ ಜಮೀನುಗಳಿಗೆ ಮಹಾದ್ವಾರದ ದಾರಿಯನ್ನೇ ಅಲವಂಬಿಸಿದ್ದಾರೆ. ಜಮೀನುಗಳಲ್ಲಿನ ಮೇವು, ಹೊಟ್ಟು ಸೇರಿದಂತೆ ದವಸ ಧಾನ್ಯಗಳನ್ನು ತರಲು, ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿ ಬಳಸುತ್ತಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ಮೇವು ತರುವಾಗ ಬ್ಯಾರಿಕೇಡ್‌ಗಳು ಅಡ್ಡಿಯಾಗುತ್ತಿವೆ. ರಸ್ತೆ ನಡು ಮಧ್ಯೆದಲ್ಲಿಯೂ ಬ್ಯಾರಿಕೇಡ್ ಹಾಕಿದ್ದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರಸ್ತೆ ದಾಟಲು ಆಗುತ್ತಿಲ್ಲ. ಜಾತ್ರೆ ಬಂದಾಗ ಬೇಕಾದರೇ ಹಾಕಿಕೊಳ್ಳಲಿ. ಈಗ ತೆರವು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.