ವಸತಿ ರಹಿತರಿಗೆ ನಿವೇಶನಕ್ಕಾಗಿ ಸರ್ಕಾರಿ ಭೂಮಿ ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಸತಿ ರಹಿತರಿಗೆ ಸರ್ಕಾರಿ ಭೂಮಿ ಕಾಯ್ದಿರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.ಸಮಿತಿ ರಾಜ್ಯಾಧ್ಯಕ್ಷ ಸಾತಿ ಸುಂದರೇಶ್ ಮಾತನಾಡಿ, ಜಿಲ್ಲೆಯಲ್ಲಿ ನಿವೇಶನ ಮನೆ ಇಲ್ಲದವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಆಳುವ ಸರ್ಕಾರಗಳ ಹೊಣೆ. ನ್ಯಾಯ ಕೇಳಿದವರನ್ನು ದೇಶ ದ್ರೋಹಿಗಳೆಂದು ಕರೆಯುತ್ತಾರೆ. ಒಂದು ವರ್ಷದ ಹಿಂದೆ ಮನೆಗಳಿಗೆ ಅರ್ಜಿ ಹಾಕಿದಾಗ ಓಟಿಪಿ ಬಂದಿರಲಿಲ್ಲ. ಈಗ ಬಂದಿದೆ. ನಗರದ ಸುತ್ತಮುತ್ತ ಇರುವ ಸರ್ಕಾರಿ ಜಮೀನುಗಳನ್ನು ಬಡವರಿಗೆ ಹಂಚಲು ಜಿಲ್ಲಾಡಳಿತ ರೆಕಾರ್ಡ್ ಸಿದ್ದಪಡಿಸಿಕೊಳ್ಳಬೇಕು. ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು ಕಾರ್ಮಿಕರ ಬದುಕು ಸುಧಾರಣೆಯಾಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಘೋಷಿಸಿರುವ ಪ್ರಧಾನಿ ಮೂರನೆ ಬಾರಿಗೆ ದೇಶದ ಚುಕ್ಕಾಣಿ ಹಿಡಿದಿದ್ದರೂ ಯುವಕರ ಕೈಗೆ ಉದ್ಯೋಗ ಸಿಕ್ಕಿಲ್ಲ. ರಾಜಕೀಯದಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಇನ್ನು ಆಗುತ್ತಿಲ್ಲ ಎಂದು ಕಿಡಿಕಾರಿದರು.ಸಮಿತಿ ಜಿಲ್ಲಾಧ್ಯಕ್ಷ ಜಿ.ಸಿ.ಸುರೇಶ್‍ಬಾಬು ಮಾತನಾಡಿ, ಕಮ್ಯುನಿಸ್ಟ್ ಪಕ್ಷದ ಹೋರಾಟದ ಫಲವಾಗಿ ಕೇರಳದಲ್ಲಿ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ಹಣದ ನೆರವು ಸಿಕ್ಕಿದೆ. ಜಿಲ್ಲೆಯಲ್ಲಿ ವಸತಿ ರಹಿತರಿಗೆ ನಿವೇಶನಗಳನ್ನು ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದೆ. ತುರ್ತಾಗಿ ನಿವೇಶನಗಳನ್ನು ನೀಡಿ ಮನೆ ಕಟ್ಟಿಸಿಕೊಳ್ಳಲು 5 ಲಕ್ಷ ರು. ಕೊಡಬೇಕು. ಕೇವಲ ಒಂದು ಲಕ್ಷ 35 ಸಾವಿರ ರು. ನೀಡಿದರೆ ಬಡವರು ಮನೆಗಳನ್ನು ಕಟ್ಟಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸಮಿತಿಯ ತಾಲೂಕು ಕಾರ್ಯದರ್ಶಿ ಟಿ.ಆರ್.ಉಮಾಪತಿ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಾಫರ್ ಷರೀಪ್, ಬಿ.ಬಸವರಾಜಪ್ಪ, ಬಿ.ಎಚ್.ಹನುಮಂತಪ್ಪ, ಎಂ.ಬಿ.ಜಯದೇವಮೂರ್ತಿ, ಈ.ಸತ್ಯಕೀರ್ತಿ, ತಿಪ್ಪಮ್ಮ, ಅಮೀನಾಭಿ, ಅಂಗನವಾಡಿಯ ಸಾವಿತ್ರಮ್ಮ, ತಿಪ್ಪಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.