ಗಂಗಾವತಿ: ನ. 3ರಂದು ಗಂಗಾವತಿ ನಗರದಲ್ಲಿ ಜರುಗುವ ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಮಹಾರಾಷ್ಟ್ರದ ಕೊಲ್ಲಾಪುರ ವಿರಕ್ತ ಮಠಾಧೀಶರಾದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಭಾಗವಹಿಸುವುದನ್ನು ವಿರೋಧಿಸಿ ಬಸವಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಮಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ್ ಅವರು, ಕೊಲ್ಲಾಪುರದ ಬೀಳೂರು ಗ್ರಾಮದಲ್ಲಿ ಜರುಗಿದ ಸ್ವಾಮೀಜಿಯೊಬ್ಬರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನೇರಿ ಮಠಾಧೀಶರು ಬೆಂಗಳೂರಿನಲ್ಲಿ ಜರುಗಿದ ಬಸವ ಸಂಸ್ಕೃತಿ ಅಭಿಯಾನದ ಕುರಿತು ಅದೊಂದು ನಾಟಕ ಕಂಪನಿ ಎಂದು ಹಿಯಾಳಿಸಿದ್ದಲ್ಲದೆ, ಎಲ್ಲ ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಖಂಡಿಸಿದರು.

ಅಲ್ಲದೇ ಧಾರವಾಡ ಮತ್ತು ವಿಜಯಪುರದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ಕನ್ನೇರಿ ಶ್ರೀಗಳ ಪ್ರವೇಶ ನಿಷೇಧಿಸಬೇಕೆಂದು ಅಲ್ಲಿಯ ಕೆಲವರು ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದ್ದರು. ಪರಿಸ್ಥಿತಿಯನ್ನು ಅರಿತು ಜಿಲ್ಲಾಧಿಕಾರಿಗಳು ಪ್ರವೇಶ ನಿರ್ಬಂಧಿಸಿದರು. ಆದರೆ ಇದಕ್ಕೆ ಪ್ರಶ್ನಿಸಿ ಸ್ವಾಮೀಜಿ ಕಲ್ಬುರ್ಗಿ ಹೈಕೋರ್ಟಿಗೆ ಹೋಗಿದ್ದರು. ನ್ಯಾಯಾಲಯ ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿಯಿತು. ಸ್ವಾಮೀಜಿಗೆ ಸುಪ್ರೀಂ ಕೋರ್ಟ್‌ನಲ್ಲೂ ಸೋಲಾಯಿತು. ಕೋರ್ಟ್‌ ಸ್ವಾಮೀಜಿಗೆ ಛೀಮಾರಿ ಹಾಕಿ ಕೇವಲ ಪೂಜೆ ಪ್ರಾರ್ಥನೆ ಮಾಡಿಕೊಂಡು ಇರುವಂತೆ ಸೂಚಿಸಿತ್ತು. ಇಷ್ಟೆಲ್ಲ ರಾದ್ಧಾಂತ ಇದ್ದ ಕಾರಣ ಸ್ವಾಮೀಜಿ ಗಂಗಾವತಿ ಸಮಾವೇಶಕ್ಕೆ ನಿರ್ಬಂಧಿಸಿ, ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.

ಗಣಚಾರಿ ದಳದ ರಾಜ್ಯಾಧ್ಯಕ್ಷ ವೀರೇಶ ಅಸರೆಡ್ಡಿ ಮಾತನಾಡಿ, ಗಂಗಾವತಿ ಶಾಂತಿ - ಸೌಹಾರ್ದದ ನಗರವಾಗಿದೆ. ಈ ಹಿಂದೆ ಕೋಮು ಸೌಹಾರ್ದ ಸಾರುವ ವಿವಿಧ ಸಮುದಾಯಗಳ ಕಾರ್ಯಕ್ರಮ ಆಯೋಜನೆಗೊಂಡಿರುವ ಉದಾಹರಣೆಗಳಿವೆ. ಆದರೆ ಈಗ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಆಗಮನದಿಂದ ಮತ್ತೆ ಶಾಂತಿ ಕದಡುವ ವಾತಾವಾರಣ ಸೃಷ್ಟಿಯಾಗಬಹುದು. ಕಾರಣ ಅವರು ಬಾರದಂತೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿ ನಿಗಾವಹಿಸಬೇಕು. ನ್ಯಾಯಾಂಗ ನಿಂದನೆ ಮಾಡಿದ ಸ್ವಾಮೀಜಿ ಮೇಲೆ ಕ್ರಮ ಕೈಗೊಳ್ಳಬೇಕು. ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ಒಂದು ವೇಳೆ ಸ್ವಾಮೀಜಿ ಸಮಾವೇಶಕ್ಕೆ ಆಗಮಿಸಿದರೆ ಉಗ್ರ ಹೋರಾಟದ ಜತೆಗೆ ಬಸವಪರ ಸಂಘಟನೆಗಳಾದ ಬಸವಕೇಂದ್ರ, ಗಣಚಾರಿ ದಳ, ರಾಷ್ಟ್ರೀಯ ವೀರಗಣಚಾರಿ ದಳ, ರಾಷ್ಟ್ರೀಯ ಬಸವದಾಳ, ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಲಿಂಗಾಯಿತ ಹಡಪದ ಸಮಾಜ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ ಸಂಘ, ಕದಳಿ ಮಹಿಳಾ ವೇದಿಕೆ, ಕ್ರಾಂತಿ ಚಕ್ರ ಬಳಗ, ಬಸವ ನೀಲಾಂಬಿಕ ಮಹಿಳಾ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿ ಸಮಾವೇಶ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದರು.

ಈ ವೇಳೆ ಎ.ಕೆ. ಮಹೇಶಕುಮಾರ, ಸೋಮನಾಥ ಪಟ್ಟಣಶೆಟ್ಟಿ, ದೀಲಿಪ್ ಕುಮಾರ ವಂದಲ, ಜೆ. ನಾಗರಾಜ್, ಹನುಮಂತಪ್ಪ ಸರಿಗಮ, ನಿರುಪಾದಿ ಹಡಪದ, ಚೆನ್ನಬಸಮ್ಮ ಕಂಪ್ಲಿ ರತ್ನಮ್ಮ ಅಲೆಗಾರ, ಶರಣಮ್ಮ ಅಸರೆಡ್ಡಿ, ಬಸಮ್ಮ ಕಲ್ಮಂಗಿ, ಹನುಮಮ್ಮ ಚಲುವಾಜಿ ಭಾಗವಹಿಸಿದ್ದರು.