ಸಾರಾಂಶ
ಸರಕಾರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕಿಗೆ ಕೊಳ್ಳಿ ಇಡುವ ನಿರ್ಣಯ ಕೈಗೊಳ್ಳುತ್ತಿದೆ.
ಹಗರಿಬೊಮ್ಮನಹಳ್ಳಿ:ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಅಂಗನವಾಡಿಗಳಲ್ಲೆ ನೀಡುತ್ತಿರುವುದನ್ನು ಹಿಂತೆಗೆಯುವ ಮೂಲಕ ಅಂಗನವಾಡಿ ಕಾರ್ಯಕರ್ತರನ್ನು ಒಕ್ಕಲೆಬ್ಬಿಸುವ ಹುನ್ನಾರ ಸರಕಾರ ನಡೆಸಿದೆ ಎಂದು ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಜೆ.ಎಂ.ಜ್ಯೋತೇಶ್ವರಿ ಬೇಸರ ವ್ಯಕ್ತಪಡಿಸಿದರು.
ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಅಂಗನವಾಡಿಯಲ್ಲೆ ಉಳಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಪದಾಧಿಕಾರಿಗಳು ಬಿಇಒ ಕಚೇರಿ ಮುಂಭಾಗ ಪ್ರತಿಭಟಿಸಿದ ವೇಳೆ ಅವರು ಮಾತನಾಡಿದರು.ಸರಕಾರ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕಿಗೆ ಕೊಳ್ಳಿ ಇಡುವ ನಿರ್ಣಯ ಕೈಗೊಳ್ಳುತ್ತಿದೆ. ಕೂಡಲೆ ಶಿಕ್ಷಣ ಇಲಾಖೆಯಿಂದ ಎಲ್‌ಕೆಜಿ, ಯುಕೆಜಿಗಳನ್ನು ಬೇರ್ಪಡಿಸಿ ಅಂಗನವಾಡಿಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು. ಬಿಇಒ ಮೈಲೇಶ್ ಬೇವೂರ್ ಇವರು ಕಾರ್ಯಕರ್ತೆಯರ ಮನವಿಗೆ ಪ್ರತಿಕ್ರಿಯಿಸಿ, ಕಾರ್ಯಕರ್ತೆಯರು ಸಲ್ಲಿಸಿದ ಬೇಡಿಕೆಗಳನ್ನು ಸರಕಾರಕ್ಕೆ ತಕ್ಷಣವೇ ಸಲ್ಲಿಸಲಾಗುವುದು. ಸರಕಾರದ ಆದೇಶವನ್ನು ಪಾಲಿಸುವುದು ಶಿಕ್ಷಣ ಇಲಾಖೆ ಹೊಣೆಯಾಗಿದೆ ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಎಚ್.ಗೀತಾ, ಖಜಾಂಚಿ ಇಮಾಂಬಿ, ಮಾಬುನ್ನಿ, ಮಾಲಿನಿ, ವಿನೋದ, ಮಹೇಶ್ವರಿ, ರೇಣುಕಮ್ಮ, ಅಕ್ಕಸಾಲಿ ಗೀತಾ, ಹಂಪಮ್ಮ, ಆರ್.ಆರ್.ಗೀತಾ, ಸೌಭಾಗ್ಯಮ್ಮ, ಕೊಟ್ರಮ್ಮ, ಯಶೋದಾ, ಲಕ್ಷ್ಮಿ, ಕಸ್ತೂರಮ್ಮ, ಭಾಗ್ಯಮ್ಮ, ದುರ್ಗಮ್ಮ, ಸುಮಾ, ಉಮಾಪಾಟೀಲ್, ಕಸ್ತೂರಿ, ಶಾಂತಮ್ಮ ಇತರರಿದ್ದರು.