ಸಾರಾಂಶ
ವಿದ್ಯಾರ್ಥಿವೇತನ ಇನ್ನೂ ವಿತರಿಸಿಲ್ಲ. ಜಿಲ್ಲೆಯ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಕ್ಕಿಲ್ಲ.
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕಟ್ಟಡ ಹಾಗೂ ಇತರೆ ಕಾರ್ಮಿಕ ಫಲಾನುಭವಿಗಳ ಸಮಸ್ಯೆಗಳು ಮತ್ತು ಕಾರ್ಮಿಕ ಇಲಾಖೆಯ ಕಚೇರಿ ಕೊರತೆಗಳ ಕುರಿತು ಇಲ್ಲಿನ ಜನಸಾಮಾನ್ಯರ ಸಮಾಜಕಲ್ಯಾಣ ಕೇಂದ್ರದಿಂದ ಕಾರ್ಮಿಕ ನಿರೀಕ್ಷಕರ ಕಚೇರಿ ಮೂಲಕ ರಾಜ್ಯ ಕಾರ್ಮಿಕ ಸಚಿವರಿಗೆ ಬುಧವಾರ ಮನವಿ ಸಲ್ಲಿಸಲಾಗಿದೆ.
ಸರ್ಕಾರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಹೆರಿಗೆ ಸಹಾಯಧನ, ವೈದ್ಯಕೀಯ ವೆಚ್ಚ, ಕಾರ್ಮಿಕರ ಅಂತ್ಯಸಂಸ್ಕಾರಕ್ಕೆ ಮತ್ತು ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಿದೆ. ವಿದ್ಯಾರ್ಥಿವೇತನ ಇನ್ನೂ ವಿತರಿಸಿಲ್ಲ. ಜಿಲ್ಲೆಯ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಕ್ಕಿಲ್ಲ.ಕೊರತೆಗಳ ಸಮಸ್ಯೆಯಿಂದ ಕಾರ್ಮಿಕ ಇಲಾಖೆಯೂ ಹೊರತಾಗಿಲ್ಲ. ಕುಮಟಾ, ಕಾರವಾರ, ಅಂಕೋಲಾ, ಹೊನ್ನಾವರ ತಾಲೂಕುಗಳಿಗೆ ನವೀನಕುಮಾರ ಎಂಬವರು ಒಬ್ಬರೇ ಕಾರ್ಮಿಕ ಅಧಿಕಾರಿಯಾಗಿದ್ದು, ಎಲ್ಲೆಡೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಕಾರ್ಮಿಕ ಕಚೇರಿ ಹೊರತುಪಡಿಸಿ ಉಳಿದ ಯಾವುದೇ ತಾಲೂಕು ಕಾರ್ಮಿಕ ಕಚೇರಿಗಳಲ್ಲಿ ಕನಿಷ್ಠ ದೂರವಾಣಿ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಕಾರ್ಮಿಕರಿಗೆ ಸರ್ಕಾರದ ಯೋಜನೆ ಸವಲತ್ತುಗಳು ಇನ್ನಿತರ ವಿಚಾರದ ಬಗ್ಗೆ ಕಚೇರಿಗೆ ಕಾಮಕಾಲಕ್ಕೆ ಸಂಪರ್ಕಿಸಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯನ್ನು ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಪಾದ ಅವರಿಗೆ ಸಲ್ಲಿಸಲಾಯಿತು. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್, ಸುಧಾಕರ ನಾಯ್ಕ, ನೀಲಾವತಿ ನಾಯ್ಕ, ಈಶ್ವರ ನಾಯ್ಕ, ಮೊಹಸಿನ್ ಸಾಬ್, ಪರ್ವೀನ್ ಬಾನು, ಸುಕ್ರಿ ಹರಿಕಂತ್ರ, ಪಾಂಡುರಂಗ ಇತರರು ಇದ್ದರು.