ಹೆಸ್ಕಾಂ ಉಪವಿಭಾಗ ಕಚೇರಿ ಆರಂಭಿಸಲು ಆಗ್ರಹ

| Published : Jan 29 2025, 01:33 AM IST

ಸಾರಾಂಶ

ಸರ್ಕಾರದ ಉತ್ತಮ ಕೆಲಸ ರೈತರು ಸ್ವಾಗತಿಸಬೇಕು. ರೈತ ವಿರೋಧಿ ನೀತಿ ಜಾರಿಗೆ ತಂದರೆ ಖಂಡಿಸಬೇಕು

ಶಿರಹಟ್ಟಿ: ತಾಲೂಕು ಕೇಂದ್ರ ಸ್ಥಳವಾದ ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಪ್ರಾರಂಭಿಸಬೇಕೆಂದು ಆಗ್ರಹಿಸಿ ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ಪದಾಧಿಕಾರಿಗಳು ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅವರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ಕುಂದುಕೊರತೆ ನಿವಾರಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಅಕ್ಬರಸಾಬ್‌ ಯಾದಗಿರಿ ಮನವಿ ಸಲ್ಲಿಸಿ ಮಾತನಾಡಿ, ಸರ್ಕಾರದ ಉತ್ತಮ ಕೆಲಸ ರೈತರು ಸ್ವಾಗತಿಸಬೇಕು. ರೈತ ವಿರೋಧಿ ನೀತಿ ಜಾರಿಗೆ ತಂದರೆ ಖಂಡಿಸಬೇಕು. ಆಗ ರೈತರ ಬದುಕು ಹಸನಾಗಲು ಸಾಧ್ಯ. ಅದೇ ರೀತಿ ನಮ್ಮ ಭಾಗದಲ್ಲಿ ಸರ್ಕಾರ ನೂತನ ಹೆಸ್ಕಾಂ ಉಪವಿಭಾಗ ಕಚೇರಿ ಶೀಘ್ರದಲ್ಲೇ ಪ್ರಾರಭಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಭಾಗದ ರೈತರಿಗೆ ಯಾವುದೇ ರೀತಿಯ ನೀರಾವರಿ ಸೌಲಭ್ಯಗಳಿಲ್ಲ. ಸಾಲಶೂಲ ಮಾಡಿ ಲಕ್ಷಗಟ್ಟಲೇ ಹಣ ಖರ್ಚ ಮಾಡಿ ಬೋರ್‌ವೆಲ್ ಕೊರೆಸಿದರೆ ಸರಿಯಾದ ವಿದ್ಯುತ್ ಪೂರೈಕೆಯಾಗದೇ ಉತ್ಪನ್ನ ತೆಗೆಯುವುದು ಕಷ್ಟವಾಗಿದೆ. ಈ ಭಾಗದ ರೈತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಶೀಘ್ರದಲ್ಲಿ ಹೆಸ್ಕಾಂ ಉಪವಿಭಾಗ ಕಚೇರಿ ಆರಂಭಿಸಿ ಹೆಚ್ಚು ಅವಧಿ ರೈತರ ನೀರಾವರಿ ಜಮೀನುಗಳಿಗೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತರು ಟಿಸಿಗಾಗಿ ಅರ್ಜಿ ಸಲ್ಲಿಸಿದರೆ ೪೮ ಗಂಟೆಯಲ್ಲಿ ಇಲಾಖೆ ತನ್ನ ಕಾರ್ಯ ಮಾಡಬೇಕೆಂಬ ನಿಯಮವಿದ್ದರೂ ಇದು ರೈತರಿಗೆ ಅನ್ವಯವಾಗುತ್ತಿಲ್ಲ. ತಿಂಗಳುಗಟ್ಟಲೇ ಕಾಯುವ ಅನಿವಾರ್ಯತೆ ಇದ್ದು, ಅಷ್ಟರಲ್ಲಿ ರೈತರ ನೀರಾವರಿ ಫಸಲು ಒಣಗಿ ಹೋಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ಕುರಿತು ಅನೇಕ ಬಾರಿ ಹೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದರು.

ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಶಿರಹಟ್ಟಿ ಅಭಿವೃದ್ಧಿ ವಿಷಯದಲ್ಲಿ ಅತ್ಯಂತ ಹೀನಾಯ ಸ್ಥಿತಿ ತಲುಪಿದೆ. ತಾಲೂಕು ಕೇಂದ್ರವಾದರೂ ಇಲ್ಲಿಯವರೆಗೆ ಹೆಸ್ಕಾಂ ಇಲಾಖೆ ಉಪವಿಭಾಗ ಕೇಂದ್ರವಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲು ಮತಕ್ಷೇತ್ರವಾದ ಶಿರಹಟ್ಟಿ ತಾಲೂಕಿನಲ್ಲಿ ಸರ್ಕಾರ ನೂತನ ಹೆಸ್ಕಾಂ ಉಪ ವಿಭಾಗ ಕಚೇರಿ ಶೀಘ್ರದಲ್ಲಿಯೇ ಪ್ರಾರಂಭಿಸಿ ಈ ಭಾಗದ ರೈತರ ನೀರಾವರಿ ಜಮೀನುಗಳಿಗೆ ಅನುಕೂಲ ಮಾಡಿಕೊಡಬೇಕು. ನಮ್ಮ ತಾಲೂಕಿನ ಕಡೆಯ ಹಳ್ಳಿಗಳಲ್ಲಿ ನೀರಾವರಿ ಹೊಂದಿದ ಸಾವಿರಾರು ಸಂಖ್ಯೆ ರೈತರಿದ್ದಾರೆ. ಸಮರ್ಪಕ ವಿದ್ಯುತ್ ಇಲ್ಲದೇ ನೀರಾವರಿ ಬೆಳೆಗಳು ಬರುತ್ತಿಲ್ಲ. ಕೂಡಲೇ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

ಹೆಸ್ಕಾಂ ವಿಭಾಗದ ಪ್ರತಿ ಕೆಲಸಕ್ಕೂ ಲಕ್ಷ್ಮೇಶ್ವರ ಅಥವಾ ಗದಗ ನಗರಕ್ಕೆ ಹೋಗಬೇಕು. ಇಡಿ ದಿನ ಹೊಲದಲ್ಲಿಯ ಎಲ್ಲ ಕೆಲಸ ಕಾರ್ಯ ಬಿಟ್ಟು ಹೋಗುವ ಅನಿವಾರ್ಯತೆ ಇದೆ. ತಾಲೂಕಿನ ಗಡಿ ಪ್ರದೇಶಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ಚಿಕ್ಕಪುಟ್ಟ ಕಾರ್ಯಗಳು ಸಹ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ಹಿಂದೆ ಹಲವಾರು ಬಾರಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ನ್ಯಾಯಯುತ ಹಾಗೂ ನ್ಯಾಯಸಮ್ಮತ ಬೇಡಿಕೆ ಇಲಾಖೆಯ ಮೇಲಾಧಿಕಾರಿಗಳು ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ ಕುಂದುಕೊರತೆ ಹೋರಾಟ ಸಮಿತಿಯಡಿಯಲ್ಲಿ ತಾಲ್ಲೂಕಿನಾದ್ಯಂತ ಉಗ್ರ ಹೋರಾಟ ಮಾಡುವದು ಅನಿವಾರ್ಯ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು.

ಮುನ್ನಾ ಢಾಲಾಯತ, ರಫೀಕ ಕೆರಿಮನಿ, ಅಪ್ಪಣ್ಣ ಕುಬೇರ, ಜಗನ್ನಾಥ ಕುಲಕರ್ಣಿ, ಶ್ರೀನಿವಾಸ ಬಾರಬರ, ಜಾಕೀರ ಕೋಳಿವಾಡ, ಎಚ್.ಆರ್. ದನ್ನೂರ, ಶ್ರೀನಿವಾಸ ಕಪಟಕರ, ಮಲ್ಲಿಕಾರ್ಜುನ ಸೂರಣಗಿ, ಶರಣು ಸೂರಣಗಿ, ಪವನ ಹೇರಲಗಿ, ಅಬ್ದುಲ್‌ಗಫಾರ ಕುದರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.