ಸಾರಾಂಶ
4ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆ ನಿಲ್ಲಿಸಲು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ಮಾಡಲಾಯಿತು. ಬಳಿಕ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಆಪ್ತ ಕಾರ್ಯದರ್ಶಿ ಚನ್ನಪ್ಪಗೆ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
4 ವರ್ಷದೊಳಗಿನ ಮಕ್ಕಳಿಗೆ ಆರ್‌ಡಿಪಿಆರ್ ರೂಪಿಸುವ ಯಾವುದೇ ಕಾರ್ಯಕ್ರಮಗಳು ಮತ್ತು 4-6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳಿಗೆ ಒಳಪಡುವುದನ್ನು ನಿಲ್ಲಿಸಬೇಕು. ಅಂಗನವಾಡಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಬೇಡ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಉಭಯ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.2016 ರಿಂದ ಶಿಕ್ಷಣ ಇಲಾಖೆ ಇಂತಹ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿದೆ. ಇರುವಂತಹ ಐಸಿಡಿಎಸ್‌ನ್ನು ಬಲಿಷ್ಠಗೊಳಿಸುವ ಬದಲಿಗೆ ಆಯಾಯ ಇಲಾಖೆಗಳು ತಮ್ಮ ವ್ಯಾಪ್ತಿಯನ್ನು ಮೀರಿ ಐಸಿಡಿಎಸ್‌ನ ಕೆಲಸಗಳನ್ನು ಹಂಚಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ರಾಜ್ಯದ ಶಿಕ್ಷಣ ನೀತಿಯನ್ನು ರೂಪಿಸಲು ಪ್ರತ್ಯೇಕ ಆಯೋಗವನ್ನು ಮಾಡಿದೆ. ಆಯೋಗ ರಚನೆಯ ವರದಿ ಬರುವ ಪೂರ್ವದಲ್ಲಿಯೇ ಈ ರೀತಿಯ ಆದೇಶ ಮಾಡಿರುವುದು ಏಕಮುಖವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶಿಕ್ಷಣ ಇಲಾಖೆ ಈಗ ಪ್ರಾರಂಭಿಸುವ ಎಲ್‌ಕೆಜಿ-ಯುಕೆಜಿಗೆ ದಾಖಲಾಗುವ ಮಕ್ಕಳು ಐಸಿಡಿಎಸ್‌ನಲ್ಲಿ ಈಗಾಗಲೇ ದಾಖಲಾಗಿರುವುದರಿಂದ ಎರಡು ಕಡೆ ಮಕ್ಕಳು ದಾಖಲು ಆಗುತ್ತಿದೆ ಎಂದು ಸಮಸ್ಯೆ ವಿವರಿಸಿದರು.
ಶಿಕ್ಷಣ ಇಲಾಖೆಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣ, ಎಬಿಸಿಡಿ ಇಂಗ್ಲಿಷ್ ವರ್ಣಮಾಲೆ ಮತ್ತು ಪದಗುಂಚಗಳನ್ನು ಮಾತ್ರವೇ ಭೋದಿಸುವುದು ಇರುತ್ತದೆ. ಮಕ್ಕಳ ಅಪೌಷ್ಟಿಕತೆಯಡೆಗೆ ಅವರ ಗಮನವಿರುವುದಿಲ್ಲ.ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ ಹಾಗೂ ಇಂತಹ ಅನೇಕ ನ್ಯೂನತೆಗಳನ್ನು ಒಳಗೊಂಡಿರುವ ಆದೇಶ ಜಾರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು ಹಾಗೂ ನಮ್ಮ ಸಂಘದ ಪ್ರತಿನಿಧಿಗಳು ಮತ್ತು ಎರಡು ಇಲಾಖೆಯ ಪ್ರಮುಖರನ್ನೊಳಗೊಂಡು ಸಮಿತಿ ರಚಿಸಿ ಕಾಲಮಿತಿಯೊಳಗೆ ವರದಿ ಮಾಡಲು ಸೂಚಿಸಬೇಕು. ಈ ವರದಿ ಬರುವ ತನಕ ಶಿಕ್ಷಣ ಇಲಾಖೆ ಹೊಸದಾಗಿ ಇಸಿಸಿಡಿಯನ್ನು ಪ್ರಾರಂಭಿಸದ ಹಾಗೆ ಸೂಚಿಸಬೇಕು. ವರದಿ ಬರುವ ತನಕ ಇಲಾಖೆ ಹೊಸದಾಗಿ ಇಸಿಸಿಡಿಯುಯನ್ನು ಪ್ರಾರಂಭಿಸಕೂಡದು. ಶಿಕ್ಷಣ ಇಲಾಖೆಯೆ ಬದಲಾವಣೆಗಳು ತರುವ ಸಮಯದಲ್ಲಿ ಡಬ್ಲ್ಯೂಸಿಒ ಇಲಾಖೆಯ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಕಾರ್ಯದರ್ಶಿ ನರ್ಮದಾ, ಖಜಾಂಚಿ ವೀರಗೋಟ ಗಂಗಮ್ಮ, ಮುಖಂಡರಾದ ಕೆ.ಜಿ ವೀರೇಶ, ಡಿ.ಎಸ್ ಶರಣಬಸವ ಸೇರಿ ಅಂಗನವಾಡಿ ನೌಕರರು, ಸಹಾಯಕರು ಇದ್ದರು.