ಬೆಳಗಾವಿ, ಹೊಸಪೇಟೆ-ರಾಯಚೂರು ನಡುವೆ ನೂತನ ರೈಲು ಸಂಚಾರ ಆರಂಭಿಸುವಂತೆ ನಗರ ರೈಲ್ವೆ ನಿಲ್ದಾಣದಿಂದ ಚಿತ್ತವಾಡ್ಗಿ ಮೂಲಕ ಹಾದು ಹೋಗುವ ಎಲ್.ಸಿ.ಗೇಟ್ ನಂ.4ರಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ಹೊಸಪೇಟೆ: ನೈರುತ್ಯ ವಲಯಕ್ಕೆ ಹೆಚ್ಚಿನ ಆದಾಯ ನೀಡುತ್ತಿರುವ ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರಯಾಣಿಕರಿಗೆ ಅಗತ್ಯವಿರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಥಳೀಯ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಭಾನುವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.ವಿವಿಧ ರೈಲ್ವೆ ಇಲಾಖೆ ಕಾಮಗಾರಿಗಳಿಗೆ ಚಾಲನೆ ನೀಡಲು ನಗರಕ್ಕೆ ಭಾನುವಾರ ಆಗಮಿಸಿದ್ದ ಕೇಂದ್ರ ರೈಲ್ವೆ ಖಾತೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಮನವಿ ಸಲ್ಲಿಸಿದ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು, ಉತ್ತರ ಕರ್ನಾಟಕ ಭಾಗದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಬೆಂಗಳೂರಿಗೆ ತ್ವರಿತವಾಗಿ ಹೋಗಿ ಬರಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಿಜಯಪುರ, ಬಾಗಲಕೋಟೆ, ಗದಗ, ಹೊಸಪೇಟೆ ಹಾಗೂ ಬಳ್ಳಾರಿ, ಬೆಂಗಳೂರು ಮಾರ್ಗದಲ್ಲಿ ವಂದೇಭಾರತ್ ರೈಲು ಸಂಚಾರ ಆರಂಭಿಸುವಂತೆ ಮತ್ತು ಬೆಳಗಾವಿ, ಹೊಸಪೇಟೆ-ರಾಯಚೂರು ನಡುವೆ ನೂತನ ರೈಲು ಸಂಚಾರ ಆರಂಭಿಸುವಂತೆ ನಗರ ರೈಲ್ವೆ ನಿಲ್ದಾಣದಿಂದ ಚಿತ್ತವಾಡ್ಗಿ ಮೂಲಕ ಹಾದು ಹೋಗುವ ಎಲ್.ಸಿ.ಗೇಟ್ ನಂ.4ರಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ತಾಲೂಕಿನ ಪಾಪಿನಾಯಕನಹಳ್ಳಿ ರೈಲು ನಿಲ್ದಾಣವನ್ನು ಅಭಿವೃದ್ದಿಪಡಿಸುವಂತೆ, ಹೊಸಪೇಟೆ ರೈಲು ನಿಲ್ದಾಣದಲ್ಲಿ ಪಿಟ್ ಲೈನ್ ಹಾಗೂ 3 ಹೊಸ ಪ್ಲಾಟ್ ಫಾರಂಗಳನ್ನು ನಿರ್ಮಿಸುವಂತೆ, ಯಶವಂತಪುರ-ಬಿಜಾಪುರ ಎಕ್ಸ್ ಪ್ರೆಸ್ ರೈಲನ್ನು ಟಿಬಿಡ್ಯಾಂ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡುವಂತೆ ಮಧ್ಯಮ ವರ್ಗದ ಪ್ರವಾಸಿಗರ ಅನುಕೂಲಕ್ಕಾಗಿ ಹೊಸಪೇಟೆ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಪ್ರವಾಸಿ ವಸತಿ ಸಂಕೀರ್ಣ ನಿರ್ಮಿಸುವಂತೆ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಲಾದ ಮನವಿಪತ್ರದಲ್ಲಿ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ, ಜಿ.ಉಮಾಮಹೇಶ್ವರ್, ದೀಪಕ್ ಉಳ್ಳಿ, ಜೆ.ವರುಣ್, ಕೌತಾಳ್ ವಿಶ್ವನಾಥ, ಹೆಚ್.ಎಂ.ಶಶಿಧರ್, ಲಕ್ಷ್ಮಣ, ಎಂ.ಕರಿಭೀಮಣ್ಣ, ಎಸ್.ಶಶಿಧರ್ ಇದ್ದರು.