ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ದೃಶ್ಯ ಮಾಧ್ಯಮಗಳ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದುರ್ಬಳಕೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಪದಾಧಿಕಾರಿಗಳು ಬುಧವಾರ ಡಿಸಿ ಮೊಹಮ್ಮದ್ ರೋಷನ್ ಹಾಗೂ ಎಸ್ಪಿ ಡಾ.ಭೀಮಾಶಂಕರ ಗುಳೇದ ಅವರಿಗೆ ಮನವಿ ಸಲ್ಲಿಸಿದರು.ಆಡಳಿತ, ಶಾಸಕಾಂಗ ಹಾಗೂ ಕಾರ್ಯಾಂಗದ ಜತೆಗೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಾನ ಪಡೆದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಗೆ ಮಸಿ ಬಳಿಯುವ ಕೆಲಸಗಳು ನಡೆದಿರುವುದು ಬಹಳ ನೋವಿನ ಸಂಗತಿ. ಯಾವುದೇ ಸುದ್ದಿ ವಿಚಾರದಲ್ಲಿ ಅಧಿಕಾರಿಗಳಿಂದ ಮಾಹಿತಿ, ಸ್ಪಷ್ಟನೆ ಪಡೆಯುವುದು ಅನಿವಾರ್ಯ. ಆದರೆ, ಇದರ ದುರಪಯೋಗಪಡಿಸಿಕೊಂಡು ಹಣ ವಸೂಲಿ ದಂಧೆ ನಡೆಸುತ್ತಿರುವುದು ದುರಂತ ಎಂದು ಮನವಿಯಲ್ಲಿ ತಿಳಿಸಲಾಗಿದೆ.ದೃಶ್ಯ ಮಾಧ್ಯಮದವರೆಂದು ಹೇಳಿಕೊಂಡು ಹಫ್ತಾ ವಸೂಲಿ ಮಾಡಿ ಇಡೀ ಮಾಧ್ಯಮ ಸಮುದಾಯ ಹೆಸರು ಹಾಳುಗೆಡುವುತ್ತಿದ್ದಾರೆ. ಈ ಕಾರಣಕ್ಕೆ ಇಲಾಖೆಗೆ ಹೋಗಿ ಯಾರಾದರೂ ವಿದ್ಯುನ್ಮಾನ ಮಾಧ್ಯಮದ ಹೆಸರಿನಲ್ಲಿ ಕಿರುಕುಳ, ಹಣ ನೀಡುವಂತೆ ಕಿರಿಕಿರಿ ಕೊಟ್ಟರೆ ನೇರವಾಗಿ ದೂರು ನೀಡಲು ಸೂಚನೆ ನೀಡಬೇಕು. ವಿದ್ಯುನ್ಮಾನ ಮಾಧ್ಯಮಗಳ ಪತ್ರಕರ್ತರ ಸೋಗಿನಲ್ಲಿ ಹಣ ವಸೂಲಿಗೆ ಇಳಿದಿರುವಂಥವರಿಗೆ ಕಡಿವಾಣ ಹಾಕಬೇಕು. ಇದಲ್ಲದೆ ಅನೇಕ ಕಡೆಗಳಲ್ಲಿ ಹಣಕಾಸಿನ ವ್ಯವಹಾರವೂ ನಡೆದಿದ್ದು, ಪತ್ರಕರ್ತರ ಹೆಸರಿನಲ್ಲಿಯೂ ಯಾರಿಗೂ ಲಂಚ ಕೊಡದಂತೆ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಕಿರುಕುಳದ ಬಗ್ಗೆ ಈಗಾಗಲೇ ನಮ್ಮ ಸಂಘದ ಗಮನಕ್ಕೆ ತಂದಿದ್ದಾರೆ. ಅವರು ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಹಾಗಾಗಿ ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು. ಅಷ್ಟೇ ಅಲ್ಲ ಸುಗಮ, ಪಾರದರ್ಶಕ ಆಡಳಿತಕ್ಕೆ ತಾವು ಮುನ್ನಡಿ ಬರೆಯಬೇಕು. ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ಕಳಂಕ ತರುವಂತಹ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಪಾಟೀಲ, ಗೌರವಾಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಚಂದ್ರು ಶ್ರೀರಾಮುಡು, ಪ್ರವೀಣ ಶಿಂಧೆ, ಅನಿಲ ಕಾಜಗಾರ, ಶ್ರೀಧರ ಕೋಟಾರಗಸ್ತಿ, ಸಂತೋಷ ಶ್ರೀರಾಮುಡು, ಸಿದ್ದನಗೌಡ ಪಾಟೀಲ, ಚಂದ್ರಕಾಂತ ಸುಗಂಧಿ, ಮಂಜುನಾಥ ರೆಡ್ಡಿ, ಅಡಿವೆಪ್ಪ ಪಾಟೀಲ, ಮೈಲಾರಿ ಪಟಾತ್ ಮೊದಲಾದವರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))