ನಕಲಿ ಜಾತಿ ಪ್ರಮಾಣ ಪತ್ರ ತಡೆಯುವಂತೆ ಒತ್ತಾಯ

| Published : Aug 18 2024, 01:52 AM IST

ಸಾರಾಂಶ

Demand to stop fake caste certificate

-ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಅಧ್ಯಕ್ಷತೆಯಲ್ಲಿ ಸಭೆ

-------

ಕನ್ನಡಪ್ರಭ ವಾರ್ತೆ ಶಹಾಪುರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ‌ ಹೆಸರಲ್ಲಿ ಅನ್ಯ ಸಮುದಾಯದವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ನಿಜವಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ‌ದವರ ಸವಲತ್ತುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ನಾಯಕರ ಸಂಘ ಹಾಗೂ ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಸರಿನಲ್ಲಿ ಅನ್ಯ ಸಮುದಾಯದವರಿಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವುದರ ಮತ್ತು ಪಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ಬೇರೆ ಬೇರೆ ಜನಾಂಗದವರು ನಕಲಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ನಿಜವಾದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಂಚನೆ ಮಾಡುತ್ತಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದರು.

ತಳವಾರ, ಪರಿವಾರ ಸಮಾಜವು ಅಂಬಿಗ, ಗಂಗಾಮತಸ್ಥ, ಠೋಕರೆ ಕೋಳಿ, ಬೋಯಾ, ಕಬ್ಬಲಿಗ ಜಾತಿಗೆ ಸೇರಿರುತ್ತಾರೆ. ಅವರು ನಾಯಕ ಜನಾಂಗದ ತಳವಾರ ಪರಿವಾರ ಜಾತಿಗೆ ಸೇರಿರುವುದಿಲ್ಲ. ಹೀಗಾಗಿ ಅವರಿಗೆ ತಳವಾರ ಜಾತಿ ಪ್ರಮಾಣ ಪತ್ರ ನೀಡುವುದನ್ನು ರದ್ದುಪಡಿಸಬೇಕು. ಅಕ್ರಮವಾಗಿ ಪಡೆದುಕೊಳ್ಳುತ್ತಿರುವ ನಕಲಿ ಜಾತಿ ಪ್ರಮಾಣ ಪತ್ರ ನೀಡದಂತೆ ತಡೆಯೊಡ್ಡಲು ಮುಂದಾಗಿರುವ ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ನಕಲಿ ಜಾತಿ ಪ್ರಮಾಣ ಪತ್ರ ತಡೆ ಸಮಿತಿ ಅಧ್ಯಕ್ಷ ಶ್ರವಣಕುಮಾರ ಡಿ. ನಾಯಕ ಮತ್ತು ರಾಜ್ಯ ಕಾರ್ಯದರ್ಶಿ ಮರೆಪ್ಪ ನಾಯಕ ಮುಗ್ದಂಪೂರ ಅವರನ್ನು ಗಡಿಪಾರು ಮಾಡುವಂತೆ ಕಲಬುರಗಿಯಲ್ಲಿ ಗಂಗಾಮತಸ್ಥರು ಪ್ರತಿಭಟನೆ ಮಾಡಿರುವುದು ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ. ಸಂಘದ ವತಿಯಿಂದ ರಾಜ್ಯಾದ್ಯಂತ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

ವಾಲ್ಮೀಕಿ ನಾಯಕ ಸಂಘದ ತಾಲೂಕಾಧ್ಯಕ್ಷ ಮರಿಯಪ್ಪ ಪ್ಯಾಟಿ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಅದು ಉನ್ನತಿ ಹೊಂದಲು ಸಂಚು ನಡೆಸಿದ್ದಾರೆ. ಇದರಿಂದ ನಮ್ಮ ಸಮುದಾಯದ ಅಧಿಕಾರಿಗಳಿಗೆ ಮೋಸವಾಗುತ್ತಿದೆ. ಅಂತಹವರಿಗೆ ಕಠಿಣ ಶಿಕ್ಷೆ ಜಾರಿ ಆಗಬೇಕು. ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗೂ ಮತ್ತು ಪಡೆದವರಿಗೆ ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದರು.

ವಾಲ್ಮೀಕಿ ನಾಯಕರ ಸಂಘದ ಉತ್ತರ ಕರ್ನಾಟಕ ಗೌರವ ಅಧ್ಯಕ್ಷ ರವಿಕುಮಾರ್ ಯಕ್ಷoತಿ, ತಾಲೂಕು ಕಾರ್ಯದರ್ಶಿ ಹಣಮಂತರಾಯ ಟೋಕಾಪುರ್, ನೌಕರರ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷ ಯಮನಪ್ಪ ಟಣಿಕೆದಾರ್, ಗೌರವಾಧ್ಯಕ್ಷ ಹುಲಿನಾಯಕ್, ಚಂದ್ರಪ್ಪ ಗುಂಜನೂರು, ಎಸ್.ಎಸ್. ನಾಯಕ, ಮಹಾಂತೇಶ್ ದೊರೆ, ತಿಮ್ಮಣ್ಣ ನಾಯಕ್, ರಾಮು ಅಳ್ಳಳ್ಳಿ, ಚಂದ್ರಕಾಂತ್ ನೀಲಹಳ್ಳಿ, ಶರಣಪ್ಪ ಜಾಕನಹಳ್ಳಿ ಇದ್ದರು.

-------

ಫೋಟೊ: 17ವೈಡಿಆರ್6: ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ನಾಯಕರ ಸಂಘ ಹಾಗೂ ವಾಲ್ಮೀಕಿ ನೌಕರರ ಸಂಘದ ಸಭೆ ನಡೆಯಿತು.