ನಕಲಿ ವೈದ್ಯರ ತಡೆಗೆ ಅಂಬೇಡ್ಕರ್‌ ಪ್ರಜಾಸೇನೆ ಆಗ್ರಹ

| Published : Mar 04 2025, 12:30 AM IST

ಸಾರಾಂಶ

ಜಿಲ್ಲೆಯಾದ್ಯಂತ ನಕಲಿ ವೈದ್ಯರುಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಲವು ಸಾವು ನೋವಿಗೆ ಕಾರಣವಾಗುತ್ತಿರುವ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಸೇನೆ ರಾಜ್ಯಾಧ್ಯಕ್ಷ ಕೆಂಪರಾಜು.ಎ.ಸಿ. ಅವರ ನೇತೃತ್ವದಲ್ಲಿ ಹತ್ತಾರು ಜನರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಸೇನೆಯ ರಾಜ್ಯಾಧ್ಯಕ್ಷ ಕೆಂಪರಾಜು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ.ಅದರಲ್ಲಿ ಗಡಿ ಪ್ರದೇಶವಾದ ಪಾವಗಡದಲ್ಲಿ ಗಲ್ಲಿಗೊಂದು ನಕಲಿ ಕ್ಲಿನಿಕ್‌ಗಳಿದ್ದು, ಇತ್ತೀಚೆಗೆ ನಡೆದ ಮೂವರು ಬಾಣಂತಿಯರ ಸಾವಿಗೆ ನಕಲಿ ವೈದ್ಯರು ನೀಡಿದ ಚಿಕಿತ್ಸೆಯೇ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ರೋಗಿಗಳ ಸಂಬಂಧಿಕರು ಮತ್ತು ವೈದ್ಯರ ನಡುವಿನ ಸಂಭಾಷಣೆಯ ಅಡಿಯೋ ಮತ್ತು ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ ಎಂದರು.

ರೋಗಿಗಳ ಪಾಲಿಗೆ ಕಂಟಕ ಪ್ರಾಯರಾಗಿರುವ ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಜ್ಞರುಗಳೊಂದಿಗೆ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ, ಅವರ ಕ್ಲಿನಿಕ್‌ಗಳನ್ನು ಮುಚ್ಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೆಂಪರಾಜು.ಎ.ಸಿ ತಿಳಿಸಿದರು.

ಈ ವೇಳೆ ಸಾಹಿತಿಗಳಾದ ರವಿ ತೊಂಡಗೆರೆ, ರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.