ಸಾರಾಂಶ
ಭಟ್ಕಳ: ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ತಡೆಯುವಂತೆ ಆಗ್ರಹಿಸಿ ಇಲ್ಲಿನ ಬಿಜೆಪಿ ಮಂಡಲದ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಆಡಳಿತ ಕಚೇರಿ ಎದುರು ಕೆಲಹೊತ್ತು ಧರಣಿ ಕುಳಿತು, ಬಳಿಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಭಟ್ಕಳದ ಚೆಕ್‌ಪೋಸ್ಟ್ ಬಂದ್ ಮಾಡಿಸಿ ಅಕ್ರಮ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಪ್ರತಿ ದಿನ ಗೋಸಾಗಾಟ ನಡೆಯುತ್ತಿದೆ. ಭಟ್ಕಳ ಸೇರಿದಂತೆ ರಾಜ್ಯದಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಅಧಿಕಾರಿಗಳು ತಮ್ಮ ಕೆಲಸ ಪಾರದರ್ಶಕವಾಗಿ ಮಾಡಬೇಕು. ಅದನ್ನು ಬಿಟ್ಟು ಅಧಿಕಾರಿಗಳು ಸಚಿವರ ಮಾತನ್ನು ಕೇಳುವುದನ್ನು, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುವುದನ್ನು ಮೊದಲು ಬಿಡಬೇಕು. ಸಚಿವರ ಮಾತಿನಂತೆ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.24 ಗಂಟೆಯೊಳಗೆ ಭಟ್ಕಳದಲ್ಲಿ ಸ್ಥಾಪಿಸಲಾದ ನಾಲ್ಕೂ ಚೆಕ್‌ಪೋಸ್ಟ್‌ಗಳನ್ನು ಪುನರಾರಂಭಿಸಿ ಬಂದೋಬಸ್ತ್ ಹೆಚ್ಚಿಸಿ, ಗೋಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆ ತಡೆಯಬೇಕು. ಭಟ್ಕಳದಲ್ಲಿ ಭೂ ಮಾಫಿಯಾ ದಂಧೆ ಹೆಚ್ಚುತ್ತಿದ್ದು, ಸಚಿವರು ಅಂಥವರಿಗೆ ಸಹಕರಿಸುತ್ತಿದ್ದಾರೆ. ತಾಲೂಕಿನಲ್ಲಿ ಹಳೇ ಅತಿಕ್ರಮಣದಾರರು ಸಂಕಷ್ಟದಲ್ಲಿದ್ದಾರೆ. ಸಚಿವರಾಗಿದ್ದವರು ತಮ್ಮ ಒಡೆತನದ ಶಾಲೆ ಬಳಿ 2.5 ಎಕರೆ ಅರಣ್ಯಭೂಮಿ ಅತಿಕ್ರಮಣ ಮಾಡಿದ್ದಾರೆ. ಜವಾಬ್ದಾರಿಯುತ ಸಚಿವರು ಈ ರೀತಿ ಅರಣ್ಯ ಭೂಮಿ ಅತಿಕ್ರಮಣ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸುವ ಕೆಲಸ ಮಾಡಬೇಕು ಮತ್ತು ಅಕ್ರಮ ಗೋಸಾಗಾಟ, ಗೋಹತ್ಯೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಗೋಸಾಗಾಟ ಹೆಚ್ಚಲು ಕಾಂಗ್ರೆಸ್, ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣರಾಗಿದ್ದಾರೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗುವುದು ಸರಿಯಲ್ಲ. ಗೋರಕ್ಷಣೆಗಾಗಿ ಅನೇಕ ಹೋರಾಟ ನಡೆದಿದ್ದು, ಗೋರಕ್ಷಣೆ ಮಾಡುವ ಹಿಂದೂ ಕಾರ್ಯಕರ್ತರನ್ನು ಅಧಿಕಾರಿಗಳು ಕೇವಲವಾಗಿ ನೋಡಬಾರದು. ನಮ್ಮ ಕಾರ್ಯಕರ್ತರ ಮೇಲೆ ಅಗೌರವ ತೋರುವುದು, ಮೈಮೇಲೆ ಕೈಹಾಕುವುದು ಮುಂದುವರಿದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿ ಬುದ್ಧಿ ಹೇಳುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ನಮಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.ಅಧಿಕಾರಿಗಳು ಸರ್ಕಾರದ ಕುಮ್ಮಕ್ಕಿನಿಂದ ಕೆಲಸ ಮಾಡುವುದು ಸರಿಯಲ್ಲ. ಚೆಕ್‌ಪೋಸ್ಟ್ ಬಿಗುಗೊಳಿಸದೇ ಇದ್ದಲ್ಲಿ ನಮ್ಮ ಕಾರ್ಯಕರ್ತರೇ ಗೋ ಸಾಗಾಟ ತಡೆಯುವುದು ಅನಿವಾರ್ಯವಾಗುತ್ತದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಕಾನೂನು ಜಾರಿಯಲ್ಲಿದ್ದರೂ ಅಧಿಕಾರಿಗಳು ಗೋಸಾಗಾಟ, ಗೋಹತ್ಯೆ ತಡೆಯುವುದು ಬಿಟ್ಟು ಸರ್ಕಾರದ ಕೈಗೊಂಬೆ ಆಗಿ ವರ್ತಿಸುವುದು ಸರಿಯಲ್ಲ ಎಂದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಗೋರಕ್ಷಣೆಗೆ ಮುಂದಾದ ಕಾರ್ಯಕರ್ತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದರು.ಅಕ್ರಮ ಗೋಸಾಗಾಟ ತಡೆಯುವ ಕುರಿತು ಮತ್ತು ಬಸ್ತಿಮಕ್ಕಿಯಲ್ಲಿರುವ ಬೀನಾ ವೈದ್ಯ ಶಾಲೆಯ ಹಿಂಭಾಗದ ಅರಣ್ಯ ಭೂಮಿ ಅತಿಕ್ರಮಣ ತೆರವು ಮತ್ತು ಕಾಯ್ಕಿಣಿ ಚರ್ಚ್ ಪಕ್ಕದಲ್ಲಿರುವ ಅರಣ್ಯ ಜಾಗದಲ್ಲಿ ಪಿಚ್ಚಿಂಗ್ ನಿರ್ಮಿಸಿ ಮಾಲ್ಕಿ ಜಾಗಕ್ಕೆ ರಸ್ತೆ ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಉಪವಿಭಾಗಾಧಿಕಾರಿ ಡಾ. ನಯನಾ ಮತ್ತು ಡಿವೈಎಸ್ಪಿ ಮಹೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಪ್ರಮುಖರಾದ ದಿನೇಶ ನಾಯ್ಕ, ಮೋಹನ ನಾಯ್ಕ, ಸುರೇಶ ನಾಯ್ಕ, ಭಾಸ್ಕರ ದೈಮನೆ, ವಿಷ್ಣುಮೂರ್ತಿ ಹೆಗಡೆ, ಪ್ರಮೋದ ಜೋಷಿ, ರಾಘು ನಾಯ್ಕ ಇದ್ದರು.ಅಕ್ರಮ ಜಾನುವಾರು ಸಾಗಾಟ, 23 ಜಾನುವಾರು, ಕಂಟೇನರ್ ಸಹಿತ ಮೂವರ ಬಂಧನಕಂಟೇನರ್ ಲಾರಿಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ೨೩ ಜಾನುವಾರುಗಳನ್ನು ಕುಮಟಾ ಪೊಲೀಸರು ಹಿಡಿದು ಪ್ರಕರಣ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮಂಡ್ಯದ ಸಾದತ್ ನಗರದ ಗುತ್ತಲ ರಸ್ತೆ ನಿವಾಸಿ ಕಂಟೇನರ್ ಚಾಲಕ ಸೈಯದ್ ಇಸ್ಮಾಯಿಲ್ ಸೈಯದ್ ಇಬ್ರಾಹಿಂ (೪೫), ಹಾಸನ ಜಿಲ್ಲೆ ಹೊಳೆನರಸಿಪುರದ ತಾತನಹಳ್ಳಿಯ ಲಕ್ಕೂರು ನಿವಾಸಿ ಮಹಮದ್ ಅತೀಕ್ ಮಹಮದ್ ಮಜೀದ್ (೩೨), ಹೊಳೆನರಸಿಪುರ ಹೈಯತ್ ನಗರದ ಇರ್ಫಾನ್ ನೂರ್ ಅಹಮದ್ (೩೧) ಬಂಧಿತ ಆರೋಪಿಗಳು. ಪ್ರಕರಣ ಸಂಬಂಧಿಸಿ ಭಟ್ಕಳ ಮದೀನಾ ಕಾಲನಿಯ ಶಾಯನುರ್, ಅವುಫ್ ಅಬು ಅಹಮದ್, ಮೋರಾ ಬಸೀದ್ ಇತರ ಆರೋಪಿಗಳೆಂದು ಗುರುತಿಸಲಾಗಿದೆ.ಬೆಳಗಾವಿಯ ಕಿತ್ತೂರಿನಿಂದ ಕಂಟೇನರ್ ಲಾರಿ ಮೂಲಕ ಅಂದಾಜು ₹೪.೨೦ ಲಕ್ಷ ಮೌಲ್ಯದ ೨೧ ದನಗಳು, ೪೦ ಸಾವಿರ ರು. ಮೌಲ್ಯದ ೨ ಕೋಣಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಭಟ್ಕಳಕ್ಕೆ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಪಟ್ಟಣದ ಮಾಸ್ತಿಕಟ್ಟೆ ವೃತ್ತದ ಬಳಿ ಶುಕ್ರವಾರ ತಡರಾತ್ರಿ ಕಂಟೇನರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಜಾನುವಾರು ಸಾಗಾಟ ಪತ್ತೆಯಾಗಿದೆ. ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.