ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕರವೇ ಆಗ್ರಹ

| Published : Nov 11 2024, 11:53 PM IST

ಸಾರಾಂಶ

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಜಿಲ್ಲಾಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಆಗ್ರಹಿಸಿದರು.

ಲಕ್ಷ್ಮೇಶ್ವರ: ತಾಲೂಕಿನ ಹಲವು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆ ತಡೆಯಲು ಜಿಲ್ಲಾಧಿಕಾರಿಗ‍ಳು ಕಠಿಣ ಕ್ರಮಕೈಗೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಆಗ್ರಹಿಸಿದರು.

ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ತಾಲೂಕಿನ ಅಕ್ಕಿಗುಂದ, ಬಟ್ಟೂರ, ಚನ್ನಪಟ್ಟಣ, ಪು.ಬಡ್ನಿ, ಹುಲ್ಲೂರು, ಅಮರಾಪೂರ, ಸೋಗಿವಾಳ, ಆದರಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಹಲವು ಟಿಪ್ಪರ್, ಲಾರಿಗಳ ಮಾಲೀಕರು ಒಂದೇ ಪಾಸಿನಲ್ಲಿ 4-5 ಟ್ರಿಪ್ ಅಕ್ರಮ ಮರಳು ಸಾಗಿಸುತ್ತಿದ್ದಾರೆ. ಟಿಪ್ಪರ್‌ಗಳಿಗೆ ಜಿಪಿಎಸ್‌ ಇದ್ದರೂ ಅದನ್ನು ಬಂದ್ ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಅಲ್ಲದೆ, ಟ್ರ್ಯಾಕ್ಟರ್ ಮೂಲಕವೂ ಅವ್ಯಾಹತವಾಗಿ ಮರಳು ಸಾಗಿಸುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಲ್ಲ ಗೊತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ತಮಗೆ ಬರುವ ಪ್ರಸಾದ್ ಸ್ವೀಕರಿಸಿ ಅಕ್ರಮ ಮರಳು ಗಣಿಗಾರಿಕೆ ಸಾಥ್ ನೀಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರಾಜಸ್ವ ನಷ್ಟವಾಗುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಅಡೂರು, ನಾಗೇಶ್ ಅಮರಾಪೂರ, ಮೈನು ಮನಿಯಾರ್, ಕೈಸರ್ ಮಹ್ಮದಲಿ, ಅಸ್ಪಾಕ ಬಾಗೋಡಿ, ಪ್ರವೀಣ ಆಚಾರಿ, ನಾಸಿರ್ ಸಿದ್ದಿ, ಯಲ್ಲಪ್ಪ ಹಂಜಗಿ, ಮಹಾಂತೇಶ ಉಮಚಗಿ, ರಫೀಕ್ ಶಿಗ್ಗಾಂವಿ, ನದೀಮ್ ಕುಂದಗೋಳ ಇದ್ದರು.